ಆರೋಗ್ಯ, ಸುರಕ್ಷಣಾ ಕಾಯಿದೆಗಳು
	
ಜನತೆಯ ಆರೋಗ್ಯ, ನೆಮ್ಮದಿಗಳನ್ನು ಪಾಲಿಸುವುದು ಒಳ್ಳೆಯ ಸರ್ಕಾರದ, ಕಾನೂನುಗಳ ಮುಖ್ಯ ಜವಾಬ್ದಾರಿಗಳಲ್ಲಿ ಒಂದು, ಹಿಂದಿನ ಕಾಲದಲ್ಲಿ ಒಬ್ಬನಿಂದ ಅಪಾಯದ ಸುಳಿವು ಕಂಡುಬಂದ ಕೂಡಲೇ ಜನತೆಗೆ ಕೆಡುಕಾಗದಿರಲೆಂದು ಅವನನ್ನು ದೂರವಿರಿಸಿ ಅಥವಾ ಕೊಂದು ಅಪಾಯದಿಂದ ಪಾರಾಗುತ್ತಿದ್ದರು. ಕುಷ್ಠರೋಗಿಗಳನ್ನು ಬದುಕಿದ್ದಂತೆ ಹೂಳುತ್ತಿದ್ದರಂತೆ. ಆಧುನಿಕ ಸಾರ್ವಜನಿಕ ಆರೋಗ್ಯ ರಕ್ಷಣಾ ಕಾಯಿದೆಗಳು ಸಮಾಜ ಶಾಸನಗಳು ಮತ್ತು ರೋಗನಿವಾರಕ ಉಪಾಯಗಳು 19ನೆಯ ಶತಮಾನದಿಂದೀಚಿನ ವಿಜ್ಞಾನದ ಮುನ್ನಡೆಯಿಂದ ಹುಟ್ಟಿ ಬೆಳೆದು ಸ್ಥಾಪಿತವಾಗುತ್ತಿವೆ. ಭಾರತದ ಸಂಸ್ಕøತಿಯ ಇತಿಹಾಸದಲ್ಲಂತೂ ಜನಾರೋಗ್ಯ ನೆಮ್ಮದಿ ಮುಖ್ಯಸ್ಥಾನ ಗಳಿಸಿದ್ದುವು. 25 ಶತಮಾನಗಳ ಹಿಂದೆಯೇ ಹರಪ್ಪ ಮತ್ತು ಮೊಹೆಂಜೊದಾರೊಗಳ ಪಂಡಿತರಿಗೆ ಚರಂಡಿಯ ವ್ಯವಸ್ಥೆ ಜನಾರೋಗ್ಯ ರಕ್ಷಣೆಗೆ ಮುಖ್ಯವೆಂಬುದು ತಿಳಿದಿತ್ತು. ಆಧುನಿಕ ವೈದ್ಯ ವಿಜ್ಞಾನ ಪಿತಾಮಹ ಹಿಪ್ಪೊಕ್ರೆಟಿಸ್ ಹುಟ್ಟುವ ಎಷ್ಟೋ ಕಾಲದ ಮೊದಲೇ, ಅಂದರೆ, ವೇದಗಳ ಕಾಲದಲ್ಲಿಯೇ, ಹಿಂದುಗಳು ನೈರ್ಮಲ್ಯದ ಮಹತ್ವ ಅರಿತಿದ್ದರು. ಆಯುರ್ವೇದದ ಚರಕಸಂಹಿತೆ ಸುಶ್ರುತಸಂಹಿತೆಗಳಲ್ಲಿ ಆರೋಗ್ಯಶಾಸ್ತ್ರಕ್ಕೆ ಬೇರೆ ಅಧ್ಯಾಯವೇ ಮುಡಿಪಾಗಿದೆ. ಸುಶ್ರುತ ಸಂಹಿತೆಯಲ್ಲಿ ಆರೋಗ್ಯ ರಕ್ಷಣೆಯಲ್ಲಿ ನೀರು ಆಹಾರಗಳ ಪಾತ್ರ ಉಲ್ಲೇಖಿಸಿದೆ. ಮಹಾಭಾರತದ ಏಳನೆಯ ಅಧ್ಯಾಯದಲ್ಲಿ (ಕ್ರಿ.ಪೂ. 600) ನೊಣ, ಕಾಗೆ, ಹದ್ದುಗಳ ಉಪದ್ರವ ಮುಂಬರುವ ವಾಂತಿ, ಭೇದಿ ಸಾಂಕ್ರಾಮಿಕದ ಸೂಚನೆ ಎಂದಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ (ಕ್ರಿ.ಪೂ. 350), ಸೈನ್ಯಗಳು ಬೀಡು ಬಿಡುವ ಜಾಗಗಳನ್ನು ತಜ್ಞರು ಪರೀಶೀಲಿಸಿದ ಮೇಲೆ ನೆಲೆಸತಕ್ಕದ್ದೆಂದು ಹೇಳಿದೆ. ಭೂಮಿಯ ಏರುಪೇರು, ನೆಲದ ಗುಣ, ಹವೆ ಹಾಗೂ ಗಾಳಿ ಬಲವಾಗಿ ಬೀಸಿದರೆ ಬಿಸಿಲು ವಿಪರೀತವಾದರೆ ರಕ್ಷಣೆಗೆ ನೆರಳಿನ ಮರ, ಇವನ್ನೆಲ್ಲ ಗಮನಿಸಬೇಕೆಂದಿದೆ. ನೀರು ಸಿಗದ ಕಡೆಗಳಲ್ಲಿ, ಶುಭ್ರವಾದ ನೀರನ್ನು ಗಾಡಿಗಳಲ್ಲಿ ಸಾಕಷ್ಟು ಒಯ್ಯಬೇಕು. ಇಲ್ಲದಿದ್ದರೆ ಕೊಳಕು ನೀರಿನಿಂದ ರೋಗಕ್ಕೆ ತುತ್ತಾಗಬೇಕಾಗುತ್ತದೆ ಎಂದಿದೆ. ರೋಮಿನ ಜೂಲಿಯಸ್ ಸೀಸರ್ ತನ್ನ ಸೈನ್ಯದ ದೈಹಿಕ ಪುಷ್ಟಿ ಅದರಲ್ಲೂ ದಿನವೂ ಸ್ನಾನ, ಬೀಡಿನ ನೈರ್ಮಲ್ಯದ ಕಡೆ ಗಮನಕೊಡುತ್ತಿದ್ದನಂತೆ. ಇಂಗ್ಲೆಂಡಿನ ಮಾರ್ಲ್‍ಬರೋ ಡ್ಯೂಕ್ ತನ್ನ ಸೈನಿಕರ ಉಡುಪು ಆಹಾರಗಳಿಗೆ ಬಹಳ ಮಹತ್ವ ಕೊಡುತ್ತಿದ್ದ. ಕಾಯಿಲೆ ಬರದಂತೆ ನೋಡಿಕೊಳ್ಳುತ್ತಿದ್ದ. ಹೀಗೆ ಯಾವುದಾದರೂ ಒಂದು ನಡವಳಿಕೆ ಆರೋಗ್ಯ ದೃಷ್ಟಿಯಿಂದ ಅತ್ಯಗತ್ಯವೆಂದೆನಿಸಿದರೆ ಅದನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಾನೂನಾಗಿ ಆಚರಣೆಗೆ ತರುವುದು ಸಮಾಜದ ಹೊಣೆ, ಕೇವಲ ರೋಗಿಗಳ ಬೇರ್ಪಡಿಕೆ, ಆರೋಗ್ಯ. ನೈರ್ಮಲ್ಯದ ನಿಯಮಗಳ ಪಾಲನೆ ಹಿಂದಿನಿಂದಲೂ ಬಂದಿದೆ. ಈ ನಿಯಮಗಳು ಸಮಾಜದ ಒಳಿತಿಗೆ ಬೇಕೇಬೇಕೆನಿಸಿದಾಗ ಕಾಯಿದೆಗಳಾಗುತ್ತಿದ್ದುವು. ಹಲವುವೇಳೆ ಕಾಯಿದೆಯಾಗಿ ಅಲ್ಲದಿದ್ದರೂ: ನಿಯಮಗಳು ಸಂಪ್ರದಾಯವಾಗೋ ಧರ್ಮನಿಷ್ಠೆಯಾಗೋ ಆಚರಣೆಗೆ ಬರುತ್ತಿದ್ದುವು. ಆರೋಗ್ಯ, ಸುರಕ್ಷಣಾ ಕಾಯಿದೆಗಳ ಮೂಲ ಉದ್ದೇಶಗಳಲ್ಲಿ ಸಮಾಜದ ವ್ಯವಸ್ಥೆ, ಶಾಂತಿ ನೆಲೆಸಿಕೆ, ಜನಬಲದ ಸಂಘಟನೆ, ಹೊಲಸು ಕೆಲಸಗಳಿಗೆ ಎಡೆಗೊಡದಿರುವುದು ಮುಖ್ಯವಾದುವು. ಈ ಕಾಯಿದೆಗಳು ಆಧುನಿಕ ಪೋಲೀಸ್ ಶಾಖೆಯ ಕಾರ್ಯಾಚರಣೆಯ ಮುನ್ಸೂಚಕಗಳೆಂದು ಹೇಳಬಹುದು. ಆರೋಗ್ಯ ಮತ್ತು ಕ್ಷೇಮರಕ್ಷಣಾ ಕಾಯಿದೆಗಳ ಚರಿತ್ರೆ ಮುಖ್ಯವಾಗಿ ಜಾತಿ, ಧರ್ಮಗಳ, ರಾಜಕೀಯ, ಆರ್ಥಿಕ ವಿಜ್ಞಾನದ ಪ್ರಭಾವಗಳಿಗೆ ಈಡಾಗಿದೆ. ಸಮಾಜ ಜೀವನದ ಆರೋಗ್ಯ ಸಮಸ್ಯೆಗಳನ್ನು ಅಂದರೆ ಸಾಂಕ್ರಾಮಿಕ ಜಾಡ್ಯಗಳ ಹತೋಟಿ, ಆವರಣ ನೈರ್ಮಲ್ಯ ಒಳ್ಳೆಯ ಆಹಾರ, ನೀರಿನ ಪೂರೈಕೆ, ಮಲಮೂತ್ರ ಮತ್ತಿತರ ಕಚರ ಪಾಕೀಜ, ಚರಂಡಿ ವ್ಯವಸ್ಥೆ, ರೋಗಿಗಳ ಚಿಕಿತ್ಸೆ ಇವನ್ನೆಲ್ಲ ನೋಡಿಕೊಳ್ಳಲು, ಆಧುನಿಕ ರೀತಿಯಲ್ಲಿ ಅಲ್ಲದಿದ್ದರೂ, ಆಗಿನ ಕಾಲದ ತಿಳಿವಳಿಗೆ ತಕ್ಕಂತೆ ವ್ಯವಸ್ಥೆ ಮಾಡಲು ಸಾರ್ವಜನಿಕ ಸಂಸ್ಥೆ ಇತ್ತು. ಆರೋಗ್ಯ ನಿಯಮಗಳು ಧಾರ್ಮಿಕ ಸಂಪ್ರದಾಯಗಳೊಂದಿಗೆ ಬೆರೆತಿದ್ದುವು. ಉದಾಹರಣೆಗೆ, ಮನೆಯಲ್ಲಿ ಯಾರಾದರೂ ಸತ್ತರೆ ಹತ್ತು ದಿವಸಗಳ ಸೂತಕವೆಂದು ಹೊರಗಿನವರೊಡನೆ ಸಂಪರ್ಕವಿಲ್ಲ. ಸಾಂಕ್ರಾಮಿಕ ಜಾಡ್ಯದಿಂದಾಗಿ ಸತ್ತಿದ್ದರೆ, ಈ ಸಂಪ್ರದಾಯದಿಂದ ಮತ್ತೊಬ್ಬರಿಗೆ ರೋಗ ಹರಡುವ ಸಂಭವ ಕಡಿಮೆ. 15 ದಿವಸಗಳಿಗೊಂದಾವರ್ತಿ ಏಕಾದಶಿ ಉಪವಾಸ. ಹಬ್ಬ ಹುಣ್ಣಿಮೆಗಳಲ್ಲಿ ಊಟಕ್ಕೆ ಬಡಿಸಬೇಕಾದ ಸಮತೂಕದ ಆಹಾರ, ದಿವಸಂಪ್ರತಿ ಸ್ನಾನ, ಶುಭ್ರವಾದ ಬಟ್ಟೆ ಹಾಕಿಕೊಳ್ಳುವುದು ಇವೆಲ್ಲ ನಿತ್ಯಕರ್ಮಗಳು. ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ ತಂಗಿಯರ ಮಕ್ಕಳು, ಸ್ವಗೋತ್ರದವರು, ಹತ್ತಿರ ಸಂಬಂಧಿಗಳು ಒಬ್ಬರಲ್ಲಿ ಒಬ್ಬರು ಕೊಟ್ಟು ತಂದು ವಿವಾಹಗಳು ನಿಷೇಧ. ಇದು ಅನುವಂಶಿಕವಾಗಿ ಬರುವ ಕುಂದುಗಳು, ದುರ್ಬಲತೆ, ರೋಗಗಳನ್ನು ತಡೆಗಟ್ಟುವ ಮುಂಜಾಗ್ರತೆಯ ಕ್ರಮ. ಹೀಗೆ ಇನ್ನೂ ಅನೇಕ ಸಂಪ್ರದಾಯಗಳು ರೂಢಿಯಲ್ಲಿವೆ. ಪಾಶ್ಚಿಮಾತ್ಯರಲ್ಲಿಯೂ ಬಹಳ ಹಿಂದಿನ ಕಾಲದಲ್ಲಿ ಚರ್ಚಿಗೂ, ರಾಜ್ಯಾಡಳಿತ ಕಾರುಬಾರುಗಳಿಗೂ ನಿಕಟ ಸಂಭಂಧವಿದ್ದೇ ಇತ್ತು. ಅನೇಕ ಶತಮಾನಗಳ ತನಕ ವಿದ್ಯಾವಂತರೆಲ್ಲರೂ ಚರ್ಚಿಗೆ ಸಂಬಂಧಿಸಿದವರೇ ಆಗಿದ್ದರು; ಅಂದರೆ ಜ್ಞಾನ, ವಿಜ್ಞಾನ ಚರ್ಚಿನ ಹತೋಟಿಯಲ್ಲಿತ್ತು. ಯೂರೋಪಿನಲ್ಲಿ ನಡೆದ ಸುಧಾರಣೆಯ ಅನಂತರವೇ ಚರ್ಚಿನ ನಿಕಟ ಸಂಬಂಧ ದೂರವಾದುದು. ಕಾಲರ, ಪ್ಲೇಗು, ಸಿಡಬುಗಳ ಉಪದ್ರವಗಳು ದೇವರ ಶಾಪವೆಂಬ ನಂಬಿಕೆಗಳು ಜನಾರೋಗ್ಯ, ಸಾಮಾಜಿಕ ಸುಧಾರಣೆಗಳಿಗೆ ಅಡಚಣೆಗಳು. 19--20ನೆಯ ಶತಮಾನದ ಕೈಗಾರಿಕಾ ಆಂದೋಲನ ಆದಮೇಲೆ ಜನಾರೋಗ್ಯ, ನೈರ್ಮಲ್ಯಗಳಿಗೆ ಅಧಿಕೃತ ಮನ್ನಣೆ ದೊರೆತಿದೆ. ಕ್ರಿ.ಶ.5001-500ರ ಕಾಲದಲ್ಲಿ ಆರೋಗ್ಯ. ನೈರ್ಮಲ್ಯಗಳ ಮಟ್ಟ ಇಳಿಯಿತು. ಗ್ರೀಕ್ ಜನರ ನೈರ್ಮಲ್ಯ ರೋಮ್ ಜನಾರೋಗ್ಯ ನೈರ್ಮಲ್ಯ ಆಧುನಿಕ ಕಾನೂನುಗಳಿಗೆ ತಳಹದಿ. ಗ್ರೀಸಿನಲ್ಲಿ ಕ್ರಿ. ಪೂ. 2100---1700ರ ಹೊತ್ತಿಗೆ ಸ್ನಾನದಮನೆ ಹಾಗೂ ಸಾರ್ವಜನಿಕ ಕಚರ ವಿಲೇವಾರಿ, ವ್ಯವಸ್ಥೆ ಇತ್ತು. ಗ್ರೀಕರು ಆರೋಗ್ಯ ನಿಯಮಗಳನ್ನೂ, ಸೂತ್ರಗಳನ್ನೂ ಜಾರಿಗೆ ತಂದರಲ್ಲದೆ, ವಾತಾವರಣಕ್ಕೂ ರೋಗೋತ್ಪತ್ತಿಗೂ ಇರುವ ನಿಕಟ ಸಂಬಂಧ ಅರಿತಿದ್ದರು. ಗಾಳಿ, ನೀರು ಮತ್ತು ಸ್ಥಳ ಮಹಾತ್ಮೆ-- ಎಂಬ ಹಿಪ್ಪೊಕ್ರೆಟಿಸ್‍ನ ಗ್ರಂಥವನ್ನು ಇಲ್ಲಿ ಉಲ್ಲೇಖಿಸಬಹುದು. ರೋಮ್ ದೇಶದವರು ಮಲೇರಿಯಾ ರೋಗ ಜೌಗುಪ್ರದೇಶದ ಕೆಟ್ಟ ಗಾಳಿಯಿಂದ ಬರುತ್ತದೆಂದುಕೊಂಡಿದ್ದರು. ರೋಗಕಾರಕ ಧೂಳನ್ನು ಕೆಲಸಗಾರರಿಗೆ ಸೇರದಂತೆ ಉಸಿರಾಟಿಕಗಳನ್ನು ಅಣಿ ಮಾಡಿದ್ದರು. ಎರಡನೆಯ ಶತಮಾನದಲ್ಲಿ ಸಾರ್ವಜನಿಕ ವೈದ್ಯ ಸೇವೆ ವ್ಯವಸ್ಥೆ ಇತ್ತು. ಒಳಚರಂಡಿ, ಕುಡಿಯುವ ನೀರನ್ನು ಸಾಗಿಸಲು ನೀರ್ಗಾಲುವೆಗಳನ್ನು ಕಟ್ಟಿದ್ದರು. ಆಸ್ಪತ್ರೆಗಳು ಸ್ಥಾಪಿತವಾದುವು. ತೌಬರ್ ನದಿಯ ಕಾಲುವೆಗಳ ನೀರನ್ನು ಕೊಳಕು ಮಾಡದಂತೆ ಕಾಯಲು, ಒಳಚರಂಡಿಗಳನ್ನು ಮಲಮೂತ್ರ ವಿಲೇವಾರಿಯನ್ನೂ ಯಶಸ್ವಿಯಾಗಿ ಆಗುವಂತೆ ಮೇಲ್ವಿಚಾರಣೆ, ಹೊಲಸು ಆಹಾರ ಪದಾರ್ಥಗಳನ್ನು ಮಾರದಂತೆ ಹಾಗೂ ಅವುಗಳನ್ನು ನಾಶಮಾಡಲು ಸಿಬ್ಬಂದಿ, ಅಳತೆ ತೂಕದಲ್ಲಿ ಮೋಸ ನಡೆಯದಂತೆ ಮೇಲ್ವಿಚಾರಣೆ ಸಾರ್ವಜನಿಕ ಸ್ನಾನಕೂಪಗಳಲ್ಲಿ, ವೇಶ್ಯಾ ಗೃಹಗಳಲ್ಲಿ, ಸ್ಮಶಾನಗಳಲ್ಲಿ ಮೇಲ್ವಿಚಾರಕರು ಇರುತ್ತಿದ್ದರು. ಬೈಜಾನ್ಟಿಯಮ್‍ನಲ್ಲಿ ಕ್ರಿ. ಶ. 532ರಲ್ಲಿ ಬಂದ ಅತಿ ಭೀಕರ ಪ್ಲೇಗ್ ಸಾಂಕ್ರಾಮಿಕ ಕಾಲದಲ್ಲಿ ಒಂದನೆಯ ಜಸ್ಟಿನಿಯನ್ ಪ್ಲೇಗ್ ರೋಗಿಯನ್ನು ಮುಟ್ಟಿಕೊಂಡಿದ್ದವರನ್ನು ಬಲಾತ್ಕಾರವಾಗಿ ಹೊರಗಿಟ್ಟಿರುತ್ತಿದ್ದ. ನಗರದೊಳಗೆ ಕಾನೂನುಬದ್ಧ ಪರವಾನಗಿ ಉಳ್ಳವರಿಗೆ ಮಾತ್ರ ಪ್ರವೇಶವಿತ್ತು.
	
ರೋಮ್ ಮತ್ತು ಗ್ರೀಸ್ ಸಂಸ್ಕøತಿಗಳು ನಾಶವಾದಂತೆಲ್ಲ ಜನಾರೋಗ್ಯ ಸುರಕ್ಷಣೆ ಸೂತ್ರಗಳು ಸಡಿಲಬಿದ್ದು ಹೋದುವು. ಆಮೇಲೆ ಬೈಜಾಂಟಿಯಮ್ ಸಾಂಸ್ಕøತಿಕ ಕೇಂದ್ರವಾಯಿತು. ಗ್ರೀಸ್, ರೋಮ್ ದೇಶಗಳ ವೈದ್ಯವಿಜ್ಞಾನ ಭಂಡಾರ ಅರಬ್ಬೀ ದೇಶಕ್ಕೆ ಬಂದಿತು. ಪಾಶ್ಚಿಮಾತ್ಯರಲ್ಲಿ ಆ ಕಾಲದಲ್ಲಿ ವೈದ್ಯ ಇನ್ನೂ ಮೋಡಿ, ಮಂತ್ರ, ತಂತ್ರಗಳ ಮಟ್ಟದಲ್ಲೇ ಇತ್ತು. ಅಲ್ಲಲ್ಲಿ ಕೆಲವೆಡೆಗಳಲ್ಲಿ ಶುಭ್ರ ನೀರಿನ ಸರಬರಾಜು, ಒಳ್ಳೆ ಗಾಳಿ ಬೆಳಕಿರುವ ವಸತಿಗಳು. ಅವನ್ನು ಬೆಚ್ಚಗಿಡುವ ವ್ಯವಸ್ಥೆಗಳಿದ್ದುವು. ಇದು ಎಲ್ಲರಿಗೂ ನಿಲುಕದ ಸೌಲಭ್ಯ. ಜನರನ್ನು ರೋಗದಿಂದ ರಕ್ಷಿಸುವುದೂ ಅವರಿಗೆ ಸಾಕಷ್ಟು ಕುಡಿಯುವ ನೀರನ್ನು ಒದಗಿಸುವುದೂ ಕಷ್ಟವಾಗಿದ್ದುವು. ಚರ್ಮ ಹದಮಾಡುವ, ಬಣ್ಣದ ಕಾರ್ಖಾನೆಗಳಿಂದ ಬರುವ ಕೆಟ್ಟ ನೀರನ್ನು ಕುಡಿಯುವ ನೀರೊದಗಿಸುವ ನದಿಗಳಿಗೆ ಬಿಡಲು ಅವಕಾಶವಿರಲಿಲ್ಲ. 15ನೆಯ ಶತಮಾನದ ಪೂರ್ವಾರ್ಧದಲ್ಲಿ ಆರೋಗ್ಯ. ವೈದ್ಯಕೀಯ ಸುಧಾರಣೆಯ ಶಾಸನಗಳು ಬಂದುವು. ಆದರೆ, ಅನೇಕವು ಕೇವಲ ಶಾಸನಗಳಾಗಿದ್ದುವೇ ಹೊರತು. ಅವನ್ನು ಕಡ್ಡಾಯವಾಗಿ ಆಚರಣೆಗೆ ತಂದಿರಲಿಲ್ಲ. ಬೇಕೆಂದಾಗ ಮಾತ್ರ ಈ ಶಾಸನಗಳು ಜಾರಿಯಾಗುತ್ತಿದ್ದುವು. ಆಹಾರಕಲಬೆರಕೆಗೆ ವಿರುದ್ಧವಾದ ಶಾಸನಗಳು ಸಾಂಕ್ರಾಮಿಕ ರೋಗ ತಲೆದೋರಿದಾಗ ರೋಗಿ ಮತ್ತವನ ಸಂಬಂಧಿಕರನ್ನು, ಹತ್ತಿರ ಇದ್ದವರನ್ನು ಬೇರೆಡೆ ಪ್ರತ್ಯೇಕಿಸುವ ಕಾಯಿದೆಗಳು ಕಡ್ಡಾಯವಾಗಿದ್ದುವು.
	
ರೋಗಗಳ ವಿಚಾರದಲ್ಲಿ ಕುರುಡು ನಂಬಿಕೆಗಳು ಇದ್ದರೂ ಕೆಲವು ಹರಡುವ ವಿಧಾನಗಳೂ ಆಗ ತಿಳಿದಿದ್ದುವು. ಜಸ್ಟಿನಿಯ್ ಕಾಲದ ಪ್ಲೇಗ್‍ನಿಂದ ಹಿಡಿದು 1348ರಲ್ಲಿ ಬಂದ ಕರಾಳ ಮೃತ್ಯುವಿನ (ಬ್ಲೇಕ್‍ಡೆತ್) ಕಾಲದತನಕ ಅನೇಕ ಭೀಕರ ಸಾಂಕ್ರಾಮಿಕಗಳು ತಲೆಹಾಕಿದ್ದುವು. ಕುಷ್ಠ, ಸಿಡುಬು, ಪ್ಲೇಗು, ದಡಾರ, ಗಂಟಲಮಾರಿ ಉರಿಶೀತ (ಇನ್‍ಪ್ಲೂಯೆನ್‍ಜಾ) ಮುಂತಾದುವು ಜನಗಳಲ್ಲಿ ಭೀತಿ ಹುಟ್ಟಿಸಿದ್ದುವು. ಅದರಲ್ಲೂ ಕುಷ್ಠರೋಗವನ್ನು ಕಂಡರೆ ಸಾಮಾನ್ಯರಿಗಿದ್ದ ಭೀತಿ ವರ್ಣಿಸಲಸಾಧ್ಯ. 13ನೆಯ ಶತಮಾನದ ಪೂರ್ವಾರ್ಧದಲ್ಲಿ ಫ್ರಾನ್ಸ್ ದೇಶ ಒಂದರಲ್ಲೇ ಸುಮಾರು 2,000 ಕುಷ್ಠರೋಗಿಗಳ ಚಿಕಿತ್ಸಾವಸಾಹತು ಆಸ್ಪತ್ರೆಗಳಿದ್ದುವಂತೆ.
	
1179ರಲ್ಲಿ ಮೂರನೆಯ ಲ್ಯಾಟಿರಾನ್ ಮಂಡಲ ಸಭೆ ಕುಷ್ಠರೋಗಿಗಳನ್ನು ಶಾಸನಕ್ಕೊಳಪಡಿಸುವ ವಿವರವಾದ ಕಾಯಿದೆ ಜಾರಿಗೆ ತಂದಿತು. ಇದರ ಅನುಭವವೇ ಮುಂದೆ ಸಹಸ್ರಾರು ಜನ ಅಸುನೀಗಿದ 14ನೆಯ ಶತಮಾನದ ಪ್ಲೇಗು ಸಾಂಕ್ರಾಮಿಕದಲ್ಲಿ ಬಳಕೆಯಾಯಿತು. ಸೋಂಕಿನ ಅನುಮಾನವಿದ್ದವರು ಸ್ಥಳೀಯ ಅಧಿಕಾರಿಗಳ ಹತ್ತಿರ ಹೋಗಿ ಪರೀಕ್ಷೆಗೊಳಪಡಬೇಕು. ಸೋಂಕು ಇದ್ದರೆ ಕಡ್ಡಾಯವಾಗಿ ಅವರನ್ನು ಬೇರ್ಪಡಿಸುವುದೊಂದೇ ಅಲ್ಲದೆ ಅವರೊಂದಿಗಿದ್ದವರನ್ನೂ ಬೇರ್ಪಡಿಸಲಾಗುತ್ತಿತ್ತು. ಆಹಾರ ಇತ್ಯಾದಿ ಆವಶ್ಯಕ ವಸ್ತುಗಳನ್ನು ಒದಗಿಸಲಾಗುತ್ತಿತ್ತು. ರೋಗಿಯ ಶವವನ್ನೂ ಅದಕ್ಕೆ ಸೇರಿದ ವಸ್ತುಗಳನ್ನೂ ಊರ ಹೊರಗಡೆ ಹೂಳಲಾಗುತ್ತಿತ್ತು. ರೋಗಿ ಸತ್ತ ನಿವೇಶನವನ್ನು ಕ್ರಿಮಿನಾಶಕ ಹೊಗೆಯಿಂದ ಶುದ್ಧಿಗೊಳಿಸುತ್ತಿದ್ದರು. ಮುಖ್ಯವಾಗಿ ವ್ಯಾಪಾರ ಕೇಂದ್ರವಾಗಿ ವೆನಿಸ್ ನಗರದಲ್ಲಿ ಈ ಕ್ರಮಗಳೆಲ್ಲ ಮೊದಲು ಜಾರಿಗೆ ಬಂದು, ಉಳಿದ ರೇವು ಪಟ್ಟಣಗಳಲ್ಲೂ ಕ್ರಮೇಣ ಅವಲೋಕನಾ ಕೇಂದ್ರಗಳೂ ಸೋಂಕು ರೋಗಿಗಳಿಗೆ ಬೇರೆಯಾಗಿ ಚಿಕಿತ್ಸೆ ನೀಡುವ ಆಸ್ಪತ್ರೆಗಳೂ ಆರಂಭವಾದುವು. ಇಂಗ್ಲೆಂಡ್ ದೇಶ ಒಂದರಲ್ಲೇ 12--15 ಶತಮಾನಗಳ ನಡುವೆ ಇಂಥ ಆಸ್ಪತ್ರೆಗಳು 720ಕ್ಕೂ ಮೀರಿದ್ದುವು. ಇವುಗಳಲ್ಲಿ 217 ಕುಷ್ಠರೋಗಿಗಳ ಕೇಂದ್ರಗಳು. ಮಧ್ಯಯುಗದ ಉತ್ತರಾರ್ಧದಲ್ಲಿ ನಗರಗಳೂ ಸರ್ಕಾರಗಳೂ ಆಸ್ಪತ್ರೆಗಳನ್ನು ಸ್ಥಾಪಿಸಿ ಅವನ್ನು ನಡೆಸಿಕೊಂಡು ಬರುವುದು ಹೆಚ್ಚಿತು.
	
ಮಧ್ಯಯುಗ ಮುಗಿಯುವ ವೇಳೆಗೆ ವೈದ್ಯಕೀಯ ಮತ್ತು ಜನಾರೋಗ್ಯ ಚಟುವಟಿಕೆಗಳು ಯೂರೋಪ್‍ನಲ್ಲಿ ಸ್ಥಳೀಯ ಸರ್ಕಾರದ ಹತೋಟಿಯಲ್ಲಿದ್ದುವು. ಕುಡಿಯುವ ನೀರನ್ನು ಕೆಡಿಸುವುದನ್ನು ತಡೆಯುವ ಕಾಯಿದೆಯೊಂದಿಗೆ, ರಸ್ತೆಗಳ ನೈರ್ಮಲ್ಯ. ಕಚರದ ವಿಲೇವಾರಿಗಳಿಗೂ ಕಾನೂನುಗಳಾದುವು. ವೈದ್ಯರು ಕೆಲವು ವಿಧಿಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕಾಯಿತು. ಪೌಷ್ಟಿಕ ಆಹಾರ ವಸ್ತುಗಳ ಮೇಲೆ ಲೇಖನಗಳು ಬರಹತ್ತಿದುವು. ಸಾರ್ವಜನಿಕ ಸ್ನಾನಗೃಹಗಳು ನಿಯಮಗಳಿಗನುಸಾರವಾಗಿರ ಬೇಕಾದದ್ದಲ್ಲದೇ ಸನ್ನದು ಪಡೆಯಬೇಕಾಗಿತು. 16ನೆಯ ಶತಮಾನದ ಮೊದಲಲ್ಲಿ ಮೇಹರೋಗಗಳು ಹರಡಿದಾಗ ಮೊದಲು ವೇಶ್ಯೆಯರ ಮೇಲೆ ಕಟ್ಟಳೆಗಳನ್ನು ವಿಧಿಸಲಾಯಿತು. ಪೌರಸಭೆಯ ಅಧಿಕಾರಕ್ಕೊಳಪಡಿಸಿದ ಸಾರ್ವಜನಿಕ ಆರೋಗ್ಯ ಪಾಲನೆ ಯಶಸ್ವಿಯಾಗಲಿಲ್ಲ. ಹೊರಗಿನಿಂದ ಹಾಗೂ ರೇವುಗಳಿಂದ ಬರುತ್ತಿದ್ದ ಭೀಕರ ಸಾಂಕ್ರಾಮಿಕ ಜಾಡ್ಯಗಳನ್ನೆದುರಿಸಿ ತಮ್ಮನ್ನು ತಾವು ಕಾಪಾಡಿಕೊಳ್ಳಲಾಗಲಿಲ್ಲ. ದೊಡ್ಡ ನಗರಗಳಲ್ಲಿ ಆರೋಗ್ಯಾಡಳಿತ ಮತ್ತು ಶಾಸನಗಳನ್ನು ಜಾರಿ ಮಾಡುವ ಅಧಿಕಾರ ಸಮಿತಿಗಳು, ಮಂಡಲಿಗಳು, ನಿಯೋಜಿತ ಜನಸಭೆಗಳ ಸದಸ್ಯರು ಮುಂತಾದವರಿಗೆ ನಿಬಂಧನೆಗಳನ್ನು ಕಾರ್ಯಗತ ಮಾಡಲಾಗಲಿಲ್ಲ. ವಸಾಹತು ಅಮೆರಿಕ ದೇಶದಲ್ಲೂ ಸಾಂಕ್ರಾಮಿಕ ಜಾಡ್ಯಗಳನ್ನೆದುರಿಸಲು ರೋಗಿಗಳನ್ನೂ ಅವರೊಂದಿಗೆ ಇದ್ದವರನ್ನೂ ಬೇರೆ ಇರಿಸಲು ಶಾಸನಗಳನ್ನು ವಿಧಿಸಲಾಯಿತು. 1620 ಡಿಸೆಂಬರ್‍ನಲ್ಲಿ ಪ್ಲಿಮತ್‍ಗೆ ಬಂದ 100 ಯಾತ್ರಿಕರಲ್ಲಿ ಅರ್ಧಜನ 3 ತಿಂಗಳಲ್ಲೆ ಸತ್ತರು. ನ್ಯೂ ಇಂಗ್ಲೆಂಡ್‍ನ 9000 ಸೈನಿಕರಲ್ಲಿ ಭೀಕರ ಸಾಂಕ್ರಾಮಿಕದಿಂದ ಬಹುಮಂದಿ ಸತ್ತು ಕೇವಲ ಕೆಲವೇ 100 ಜನ ಉಳಿದರು. ರೋಗ ವಿರೋಧ ಚುಚ್ಚುಮದ್ದು ಕೊಡುಗೆ ಕೆಲವು ವಸಾಹತುಗಳಲ್ಲಿ ಆರಂಭವಾಯಿತು. ಆಮೇಲೆ ಇದು ಶಾಸನವಾಯಿತು. ಅಮೆರಿಕ ದೇಶದಲ್ಲೇ ಮೊದಲಿನ ಆರೋಗ್ಯಸಮಿತಿ 1793ರಲ್ಲಿ ಮೇರಿಲ್ಯಾಂಡ್‍ನ ಬಾಲ್ಟಿಮೋರ್ ನಗರದಲ್ಲಿ ಸ್ಥಾಪನೆ ಆಯಿತು. ಇದೇ ತೆರನ ಸಮಿತಿಗಳು ನ್ಯಾಯಾರ್ಕ್, ಮೆಸಾಚುಸೆಟ್ಸ್‍ಗಳಲ್ಲೂ ಆರಂಭವಾದುವು.
	
ಕೈಗಾರಿಕೋದ್ಯಮಗಳ ಕ್ರಾಂತಿಯಿಂದಾಗಿ ನಗರಗಳ ಜನನಿಬಿಡತೆ ಒಮ್ಮೆಲೇ ಹೆಚ್ಚಿ ಕಾರ್ಖಾನೆಗಳ ಸುತ್ತಲೂ ಕೊಳಚೆಜಾಗಗಳು ಹುಟ್ಟಿಕೊಂಡು ಭಯಂಕರ ಅನಾರೋಗ್ಯವಾಯಿತು. ಲಂಡನ್ ನಗರದಲ್ಲಿ ಕೊಳಚೆ ಪ್ರದೇಶಗಳ ನಿರ್ಮಲೀಕರಣ ಚಟುವಟಿಕೆ ಆರಂಭವಾಯಿತು. (1760) ಕೊಳಚೆ, ರೋಗಗಳ ಜತೆಗೆ ಬಡತನ, ನಿರುದ್ಯೋಗ ತಲೆಹಾಕಿದ್ದುವು. ಎಲಿಜಬೆತ್ ಬಡತನ ನಿವಾರಣಾ ಕಾನೂನು ಆಯಾ ಪ್ಯಾರಷ್‍ಗಳಿಗೆ ವೈದ್ಯಕೀಯ ನೆರವು ಹಾಗೂ ಇತರ ಉಪಶಮನಗಳಿಗೆ ಜವಾಬ್ದಾರಿ ವಹಿಸಿತು.
	
ಸಾಮಾಜಿಕ ಸುಧಾರಣೆಗಳು: ಬಡತನದಿಂದ ರೋಗ, ರೋಗದಿಂದ ಬಡತನ. ಕೊಳಚೆ ಎಡೆಗಳಲ್ಲಿ ಹೆಚ್ಚು ರೋಗ. ರೋಗ ಹೆಚ್ಚಿದ್ದಲ್ಲಿ ಕೊಳಚೆ, ಹೊಲಸು, ಬಡತನದೊಂದಿಗೆ ಕೆಟ್ಟ ಕೆಲಸ, ಅಪರಾಧ; ಇವೇ ಮೊದಲಾದ ಸಂಗತಿಗಳು 19ನೆಯ ಶತಮಾನದ ಮೊದಲಲ್ಲೇ ಮನದಟ್ಟಾಗಿದ್ದುವು. ಈ ಪರಿಸ್ಥಿತಿ ಪ್ರಾರಬ್ಧ ಕರ್ಮವೇನೂ ಅಲ್ಲ. ಪರಿಹಾರವಿಲ್ಲದಂಥ ಸಮಸ್ಯೆಯೂ ಅಲ್ಲವೆಂಬುದು ಗೋಚರವಾಗತೊಡಗಿತು. ಇಂಗ್ಲೆಂಡಿನಲ್ಲಿ ಸುಪ್ರಸಿದ್ಧ ಸಮಾಜ ಸುಧಾರಕರು ಜರೇಮಿಬೆಂತ್ಯಾಮ್, ಎಡ್ವಿನ್ ಚಾಡ್‍ವಿಕ್ ಮುಂದಾಳುತನದಲ್ಲಿ ಸುಧಾರಣೆಗಳನ್ನು ತರಲು ತೀವ್ರ ಆಸಕ್ತಿ ವಹಿಸಲಾಯಿತು. ಈ ಸಮಸ್ಯೆಗಳನ್ನು ಬಿಡಿಸಿ ಮುಂದಿನ ಕ್ರಮಗಳನ್ನು ಸೂಚಿಸಲು ಚಕ್ರವರ್ತಿ ಆಯೋಗ ನೇಮಕವಾಯಿತು. ಈ ಸಮಿತಿ ವರದಿ ಒಪ್ಪಿಸಿತು. ಇತರ ಸಂಶೋಧನೆಗಳೂ ನಡೆದುವು. ಅಂಕಿಅಂಶಗಳೂ ಸಂಗ್ರಹವಾಗಿ ಲಂಡನ್ ನಗರದ ಸಮಾಜ ಸುಧಾರಣಾ ಶಾಸನ (1830) ಜಾರಿಗೆ ಬಂದಿತು.
	
ಅಂಕಿ ಆಂಶ ಸಂಗ್ರಹಣ: ಈ ಸುಧಾರಣಾ ಚಳವಳಿಯಿಂದ ಆರಂಭವಾದ ಅಂಕಿಅಂಶಗಳ ಸಂಕಲನ ಶಾಸನಗಳ ಪ್ರತಿಪಾದನೆಗೆ ಮಾರ್ಗದರ್ಶಕವಾದದ್ದಲ್ಲದೆ ಜನಸಾಮಾನ್ಯರಿಗೆ ಅರಿವು ಜಾಗೃತಿ ಮೂಡಿ ಸುಧಾರಣೆಗಳಿಗೆ ಒತ್ತಾಯಪಡಿಸಿದರು. ಈ ಚಳವಳಿಯಲ್ಲಿ ಹೆಸರಾಂತ ವ್ಯಕ್ತಿ 19ನೆಯ ಶತಮಾನದ ಜೀವಸಂಖ್ಯಾಶಾಸ್ತ್ರಜ್ಞ ವಿಲಿಯಮ್ ಫಾರ್ (1875). ಇವನು ವಿಮರ್ಶಿಸಿದ ಅಂಕಿಅಂಶಗಳು ನಮ್ಮ ಸಮಾಜದ ಜೀವನ, ಆಹಾರ ಆರ್ಥಿಕಸ್ಥಿತಿ ಇತ್ಯಾದಿಗಳಿಗೂ ಸಮಾಜದ ಜನರ ಆರೋಗ್ಯ ಅನಾರೋಗ್ಯಕ್ಕೂ ಇರುವ ನಿಕಟ ಸಂಬಂಧವನ್ನು ಎಲ್ಲರಿಗೂ ಎತ್ತಿ ತೋರಿದಂತಾಯಿತು. ಮಾನವಕುಲದ ಕಷ್ಟಕಾರ್ಪಣ್ಯಗಳಿಗೆ ಮಿತಿ ಮೀರಿದ ಜನಸಂಖ್ಯೆ ಕಾರಣವಲ್ಲ. ಒಬ್ಬೊಬ್ಬನಲ್ಲೂ ಇದ್ದೇ ಇರುವ ನ್ಯೂನತೆಗಳೇ ಕಾರಣ ಎಂದ. ಜೀವನ ಗಣತಿಯನ್ನು ಇವನು ವಿಜ್ಞಾನದ ಮಟ್ಟಕ್ಕೇರಿಸಿದ. ಇದಕ್ಕೂ ಮುಂಚೆ ಸರ್ ವಿಲಿಯಮ್ ಪೆಟ್ಟಿ ದೇಶದ ಆಡಳಿತದಲ್ಲಿ ಜನಗಳ ಆರೋಗ್ಯ, ಅನಾರೋಗ್ಯಗಳ ಪ್ರಭಾವವನ್ನು ತೋರಿಸಿದ. ರೋಗಬಾರದಂತೆ ತಡೆಗಟ್ಟುವ ಸ್ವಲ್ಪವೇ ಹಣ ದೇಶದ ಹಣಕಾಸಿನ ಹೆಚ್ಚಳಕ್ಕೆ ಬಹಳ ಸಹಾಯಕ. ರೋಗಕ್ಕೀಡಾಗದ ರೋಗದಿಂದ ಸಾಯದೆ ಉಳಿದ ಜನಗಳಿಂದ ಕೈಗಾರಿಕೆ, ಉದ್ಯಮ ಇತ್ಯಾದಿಗಳಲ್ಲಿ ಹೆಚ್ಚು ಉತ್ಪಾದನೆಯೇ ಇದಕ್ಕೆ ಕಾರಣ. 17ನೆಯ ಶತಮಾನದಲ್ಲಿ, ಜಾನ್ ಗ್ರಾಂಟ್ (1662) ಜನಾರೋಗ್ಯದ ವಿಚಾರವಾಗಿ ಅಂಕಿಅಂಶಗಳನ್ನು ಸಂಗ್ರಹಿಸಿ ಅವುಗಳ ಮಹತ್ವವನ್ನು ತೋರಿಸಿದ. ಜರ್ಮನಿಯ ಇನ್ನೂ ಹೆಸರಾದವರ ಪರಿಶೋಧನೆ. ವರದಿಗಳೇ ಮುಂದೆ ಬಿಸ್ಮಾರ್ಕ್ ಜಾರಿಗೆ ತಂದ ಶಾಸನಗಳಿಗೆ ಆಧಾರ. ಮೊದಲು (1748) ಜನನ, ಮರಣ, ಇತ್ಯಾದಿಯ ಜೀವನಗಣತಿಯನ್ನು ಕಡ್ಡಾಯಮಾಡಿದ ಶಾಸನ ಜಾರಿಗೆ ತಂದ ಹೆಸರು ಸ್ವೀಡನ್ ದೇಶದ್ದು. ಮೊಟ್ಟಮೊದಲನೆಯ ಜನಗಣತಿ 1801ರಲ್ಲಿ ಇಂಗ್ಲೆಂಡ್‍ದಲ್ಲೂ ಭಾರತದಲ್ಲಿ 1867-1872 ರಲ್ಲೂ ಆಮೇಲೆ 1881ರಲ್ಲೂ ಜರುಗಿತು. ಅಲ್ಲಿಂದೀಚೆಗೆ ಇದು ದಶಕಗಳಿಗೊಮ್ಮೆ ತಪ್ಪದೆ ನಡೆದುಕೊಂಡು ಬಂದಿದೆ. ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ ಮೊದಲು ಮೆಸಾಚುಸೆಟ್ಸ್ ಸಂಸ್ಥಾನ ಕಾರ್ಮಿಕರ ಅಂಕಿಅಂಶ ಸಂಗ್ರಹದ ಖಾತೆಯನ್ನು ಪ್ರಾರಂಭಿಸಿತು. ನ್ಯೂಯಾರ್ಕ್ ಜನಗಳ ಆರೋಗ್ಯ, ಅನಾರೋಗ್ಯದ ವಿಚಾರವಾಗಿ ಜಾನ್ ಗ್ರಿಸ್ಕೋಮ್ ಅಧ್ಯಯನ ಮಾಡಿ 1845ರಲ್ಲಿ ವರದಿ ಒಪ್ಪಿಸಿದ. ಬಾಸ್ಟನ್ ನಗರದಲ್ಲಿ ಹೊರಬಿದ್ದ ಶ್ಯಾಟಕ್‍ನ ವರದಿ (1850) ಯಿಂದ ಆರೋಗ್ಯಶಾಸನ ರೂಪಗೊಂಡಿತು. ಮುಂದಿನ ಶಾಸನಗಳಿಗೆ ಇದೇ ಮಾದರಿಯಾಯಿತು ಬರಬರುತ್ತಾ ಜೀವನಗಣತಿಗಾಗಿನ ಅಂಕಿಅಂಶಗಳ ಸಂಗ್ರಹಣೆಯ ಮಹತ್ವದ ಅರಿವು ಜನಸಾಮಾನ್ಯರಿಗೂ ತಿಳಿದುಬಂತು. ಶಾಸನಗಳಲ್ಲಿನ ಕಟ್ಟಳೆಗಳನ್ನು ಜಾರಿಮಾಡಲು ಸುಸಜ್ಜಿತ ಪೊಲೀಸ್ ಖಾತೆ ಸಿದ್ಧವಾಯಿತು. ಮೊದಲು ಸಮಸ್ಯೆಗಳ ಅಂಕಿಅಂಶಗಳನ್ನು ಸಂಗ್ರಹಿಸಿ, ಅಧ್ಯಯನ ಮಾಡಿದ ಮೇಲೆ ಈ ಶಾಸನಗಳೆಲ್ಲವೂ ರೂಪಗೊಂಡುವು. ಹಿಂದೆಂದೂ ನಡೆಯದ ಈ ಬಗೆಗಳ ರಾಷ್ಟ್ರೀಯ ಮಟ್ಟದ ದಿಸೆಯಲ್ಲಿ ಯೂರೋಪ್, ಮತ್ತು, ಅಮೇರಿಕ ಸಂಯುಕ್ತಸಂಸ್ಥಾನಗಳು ಬಹಳ ಮುಂದುವರಿದುವು. ಯೂರೋಪ್ ದೇಶಗಳಲ್ಲಿ ಕೂಸುಮರಣಗಳು, (ಹುಟ್ಟಿದ ಆಮೇಲೆ ಮೊದಲನೆಯ ಹುಟ್ಟಿದ ಹಬ್ಬವನ್ನೂ ಕಾಣದೆ ಸತ್ತ ಹಸುಳೆಗಳ ಸಂಖ್ಯೆ) ಅತಿಯಾಗಿತ್ತು. ಈ ಮಿತಿಮೀರಿದ ಸಾವುಗಳನ್ನು ತಡೆಗಟ್ಟಲೂ ಜನರಲ್ಲಿ ನೈತಿಕ ಮಟ್ಟವನ್ನು ಸುಧಾರಿಸಲೂ ಪಾರ್ಲಿಮೆಂಟಿನಲ್ಲಿ ಕೆಲವು ಕಾಯಿದೆಗಳಾದುವು. ಮ್ಯಾಜಿಸ್ಟ್ರೇಟರುಗಳಿಗೆ ಅನೇಕ ವಿಧದ ಆರೋಗ್ಯಕ್ಕೆ ಸಂಬಂಧಪಟ್ಟ ಕಾರ್ಯಾಚರಣೆಗಳು ಮೇಲ್ವಿಚಾರಣೆಗಾಗಿ ಅನುಜ್ಞೆ ಅಧಿಕಾರವೀವ ಕಾನೂನು (1751) ಜಾರಿಗೆ ಬಂತು. ಮೊಟ್ಟಮೊದಲಿನ ಸಮಾಜ ಸುಧಾರಣಾ ವಿಮಾ ಎನ್ನಬಹುದಾದ ಶಾಸನ ಮಂಡಿತವಾಯಿತು (1757). ಇದರಿಂದ ಥೇಮ್ಸ್ ನದಿಯಲ್ಲಿ ಓಡಾಡುವ ಹಡಗು ಇತ್ಯಾದಿಗಳಿಗೆ ಕಲ್ಲಿದ್ದಲನ್ನು ಹೊರುವ ಕಾರ್ಮಿಕರಿಗೆ ಒಂದು ರೀತಿಯ ಪರಿಹಾರಕ್ಕೆ ಏರ್ಪಾಡಾಯಿತು. ಯಜಮಾನ ಕಾರ್ಮಿಕನ ಕೂಲಿಯ ಹಣದ ಸ್ವಲ್ಪ ಭಾಗವನ್ನು ಮುರಿದುಕೊಂಡು ಕೂಡಿಟ್ಟ ಹಣದಿಂದ ಕಾರ್ಮಿಕನಿಗೆ ಕಾಯಿಲೆಯಾದಾಗ, ಊನವಾದಾಗ, ಮುಪ್ಪಾದಾಗ, ಸತ್ತಾಗ ಪರಿಹಾರ ಹಣ ನೀಡಲು ಕಾನೂನಾಯಿತು. ಈ ಶಾಸನದಲ್ಲಿ ಶರತ್ತುಗಳನ್ನು ಪಾಲಿಸುವಾಗ ಮಾಲೀಕರು ಕಾರ್ಮಿಕರಿಗೆ ಅನ್ಯಾಯ ಮಾಡಿದ್ದರಿಂದ, ಈ ಶಾಸನ ರದ್ದಾಯಿತಾದರೂ (1770). ಅದು ಮತ್ತೆ 1792ರಲ್ಲಿ ಪುನರುದ್ಧಾರವಾಯಿತು. ಈ ನಿಧಿಯ ಮೇಲ್ವಿಚಾರಣೆ, ಆಡಳಿತಗಳನ್ನು ನ್ಯಾಸಧಾರಿಗಳ (ಟ್ರಸ್ಟೀಸ್) ವಶಕ್ಕೆ ಹೋಯಿತು.
	
ಸರ್ ರಾಬರ್ಟ್ ಪೀಲ್ ಮಂಡಿಸಿದ ಉಮೇದುವಾರರ ಆರೋಗ್ಯ ಮತ್ತು ನೈತಿಕ ಸುಧಾರಣಾ ಕಾಯಿದೆ 1802ರಲ್ಲಿ ಜಾರಿಗೆ ಬಂತು. ಇದರಿಂದ ಹತ್ತಿಗಿರಣಿಗಳಲ್ಲಿ ಕೆಲಸಮಾಡುತ್ತಿದ್ದ ಬಾಲ ಕಾರ್ಮಿಕರ ಪರಿಸ್ಥಿತಿಯನ್ನು ಉತ್ತಮಪಡಿಸಲು ಅನುಕೂಲವಾಯಿತು. ಆದರೂ ಈ ಶಾಸನದಿಂದ ಏನೂ ಅನುಕೂಲ ಆಗದಿದ್ದರೂ ಸರ್ಕಾರಕ್ಕೆ ಕಾರ್ಮಿಕರಲ್ಲಿ ಇರುವ ಶ್ರದ್ಧೆಯನ್ನು ತೋರಿದಂತಾಯಿತು. ಬೇರೆ ದೇಶಗಳಲ್ಲೂ ಕೈಗಾರಿಕೋದ್ಯೋಮಗಳಲ್ಲೂ ಬಾಲ ಕಾರ್ಮಿಕರಿಗೆ ಅನ್ವಯಿಸುವ ಕಾಯಿದೆಗಳಿಗಾಗಿ ಒತ್ತಾಯ ಆರಂಭವಾಯಿತು. 
	
ಬಡತನ ಪರಿಹಾರ ಕಾನೂನನ್ನೂ (1834) ಜನಾರೋಗ್ಯಪಾಲನೆ ಕಾನೂನುಗಳನ್ನೂ (1844-45) ತರಲು ಪ್ರಮುಖ ಪಾತ್ರ ವಹಿಸಿದವ ಎಡ್ವಿನ್ ಚಾಡ್ವಿಕ್. ರೋಗವೇ ಬಡತನಕ್ಕೆ ಕಾರಣವೆಂದು ಇವನಿಗೆ ಚೆನ್ನಾಗಿ ಮನದಟ್ಟಾಗಿತ್ತು. ಬ್ರಿಟನ್ ದೇಶದ ಕಾರ್ಮಿಕ ಜನತೆಯ ನೈರ್ಮಲ್ಯ ಸ್ಥಿತಿಗತಿಗಳ ಪರಿಶೀಲನಾ ಸಮಿತಿಯ ವರದಿ ಹೊರಬಿತ್ತು (1842). ಈ ಸಮಿತಿಯ ಕಾರ್ಯದರ್ಶಿ ಎಡ್ವಿನ್ ಚಾಡ್ವಿಕ್. ಈ ವರದಿಯ ಮೇಲೆ ರಚಿಸಿದ ಶಾಸನಗಳು ಆರೋಗ್ಯ, ಸುರಕ್ಷಣೆ, ಸಮಾಜ ಸಮಸ್ಯೆಗಳ ಮೇಲೆ ರಾಷ್ಟ್ರೀಯಮಟ್ಟದ ಮೇಲ್ವಿಚಾರಣೆ ಮತ್ತು ಹತೋಟಿಗೆ ಆಧಾರವಾದುವು. 1833ರ ಕಾರ್ಖಾನೆ ಕಾಯಿದೆ ಅನಂತರ ಬಂದ ಆಧುನಿಕ ಕೈಗಾರಿಕಾ ಉದ್ಯಮಗಳ ಶಾಸನಕ್ಕೆ ಹಿನ್ನೆಲೆಯಾಯಿತು. ಲಿವರ್ಪೂಲಿನ ನೈರ್ಮಲ್ಯ ಕಾಯಿದೆ (1846)ಯಿಂದಾಗಿ ನಗರಕ್ಕೆ ಆರೋಗ್ಯಾಧಿಕಾರಿ ಹಾಗೂ ಇಂಜಿನಿಯರ್‍ಗಳು ಬರುವಂತಾಯಿತು. ಅದೇ ವರ್ಷ ಜಾರಿಯಾದ ಉಪದ್ರವ ಕಳೆವ ಶಾಸನ, ರೋಗನಿರೋಧಕ ಶಾಸನ ಇವೇ ಮೊದಲಾದವು (1848) ಜಾರಿಗೆಬಂದ ಜನಾರೋಗ್ಯ ಶಾಸನದ ಪೀಠಿಕೆಯಾದವು. 
	
ಯೂರೋಪಿನಲ್ಲಿ: ಇಂಗ್ಲೆಂಡಿನಲ್ಲಿ ಈ ಸಮಾಜ ಸುಧಾರಣ ಶಾಸನಗಳು ಆಗುತ್ತಿದ್ದಂತೆಯೇ ಜರ್ಮನಿ, ಫ್ರಾನ್ಸ್‍ಗಳಲ್ಲೂ ಚಳುವಳಿ ರಭಸದಿಂದ ಮುಂದುವರಿಯಿತು. ಜರ್ಮನಿಯ ಜೋಹಾನ್ ಪೀಟರ್ ಫ್ರಾಂಕ್ ಆರೋಗ್ಯ ಸಮಸ್ಯೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಧಾರಿಸಲೂ ಅದರ ಆಡಳಿತಕ್ಕೆ ರಾಷ್ಟ್ರೀಯ ಮಟ್ಟದ ಆರೋಗ್ಯ ಇಲಾಖೆಗಳಿರಬೇಕೆಂತಲೂ ಮೊಟ್ಟ ಮೊದಲು ಪ್ರತಿಪಾದಿಸಿದ. ಅದನ್ನು ಕಡ್ಡಾಯವಾಗಿ ಆಚರಣೆಗೆ ತರಲು ವೈದ್ಯಕೀಯ ಪೊಲೀಸ್ ಖಾತೆ ನಿರ್ಮಾಣವಾಗಬೇಕೆಂದು ಶಿಫಾರಸ್ಸಾಯಿತು. ಇದೇ ರೀತಿ ಫ್ರಾನ್ಸಿನಲ್ಲೂ ಕಾರ್ಮಿಕರ ಆರೋಗ್ಯ ಸುರಕ್ಷಣೆ ಸರ್ಕಾರದ ಜವಾಬ್ದಾರಿ ಎಂದಾಯಿತು. ಕೈಗಾರಿಕೋದ್ಯಮಗಳಲ್ಲಿ ಕಾರ್ಮಿಕರಿಗೆ ಉಂಟಾಗುವ ಅಪಘಾತಗಳಲ್ಲಿ ರಕ್ಷಣೆ, ಪರಿಹಾರ ಕೊಡುವುದಲ್ಲದೆ ಗರ್ಭಿಣಿಯರು ಹಡೆದಾಗ ಅವರ ಆರೈಕೆ, ವೇತನ, ರೋಗ ಬಂದಾಗ ವಿಶ್ರಾಂತಿ ವೇತನ, ಮುಪ್ಪು, ನಿರ್ಬಲತೆ, ಊನಯಿಕೆ ಹಾಗೂ ಸಾವು ಒದಗಿದಾಗ ನೀಡುವ ಪರಿಹಾರಗಳಿಗೆ ಶಾಸನಗಳಾದವು (1884). ಈ ವಿಷಯದಲ್ಲಿ ಮುಂಬರುವ ಸಮಾಜ ಸುಧಾರಣಾ ಕಾಯಿದೆಗಳಿಗೆಲ್ಲಾ ಅಡಿಗಲ್ಲನ್ನು ಹಾಕಿ, ಜರ್ಮನಿ ಮುಂದಾಳತ್ವ ವಹಿಸಿತು.
	
ಅಮೆರಿಕದಲ್ಲಿ: ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲೂ ಈ ಶಾಸನಗಳು ಹೆಚ್ಚೂ ಕಡಿಮೆ ಇಂಗ್ಲೆಂಡಿನಲ್ಲಿ ಆದ ಹಾಗೇ ರೂಪುಗೊಂಡಿತಾದರೂ ಸಾಮಾನ್ಯವಾಗಿ ಹೇಳುವುದಾದರೆ, ಶಾಸನಗಳು ಜಾರಿಗೆ ಬರಲು ಸಾವಕಾಶವಾಯಿತು. 19ನೆಯ ಶತಮಾನದ ಮೊದಲಲ್ಲಿ, ಹೆಂಗಸರು, ಮಕ್ಕಳು ಕೂಲಿ ಮಾಡುವ ಕಾಲ ನಿರ್ಧರಿಸುವ, ಅವರಿಗೆ ಸಾಕಷ್ಟು ರಕ್ಷಣೆ ಕೊಡುವ ಶಾಸನಗಳು ಮೊದಲು ಜಾರಿಗೆ ಬಂದುವು. ಹೀಗೆ ಶಾಸನಗಳಾದರೂ ಅವನ್ನು ಆಚರಣೆಗೆ ತರಲೂ ಆಚರಿಸದವರ ಮೇಲೆ ಕ್ರಮ ಜರುಗಿಸಲೂ ವ್ಯವಸ್ಥೆ ಇರಲಿಲ್ಲ. ಕ್ರಮ ಜರುಗಿಸಿದರೂ ನುಣುಚಿಕೊಳ್ಳಲು ಸಾಕಷ್ಟು ನ್ಯೂನತೆಗಳು ಇದ್ದುವು. ಅಮೆರಿಕದ ಒಳಕಲಹವಾದ ಮೇಲೂ ಸಂಸ್ಥಾನಗಳಲ್ಲಿನ ಶಾಸನಗಳು ಕ್ರಮಬದ್ಧವೆಂದೇ ಎಲ್ಲರೂ ತಿಳಿದಿದ್ದರು. ಸಮಾಜ ಸುಧಾರಣಾ ಶಾಸನಗಳು, ಕರಾರುಗಳಲ್ಲಡಗಿರುವ ನಿಬಂಧನೆಗಳನ್ನು ಕಡ್ಡಾಯ ಮಾಡಬೇಕೆಂದು ಹಾಕಿರುವ ಶರತ್ತುಗಳು, ಸರ್ಕಾರ, ವ್ಯಾಪಾರ, ಕೈಗಾರಿಕೆಗೆ ಇತ್ಯಾದಿ ವ್ಯಕ್ತಿ ಪ್ರಯತ್ನಗಳಲ್ಲಿ ಪ್ರವೇಶಿಸಕೂಡದು ಎಂಬ ನ್ಯಾಯ ಸಮ್ಮತವಾದ ತತ್ವಕ್ಕೆ ಧಕ್ಕೆ ಎನ್ನುವ ಭಾವನೆ, 1890ರ ವರೆಗೆ ಜನಗಳಲ್ಲಿ ಮೂಡಲಿಲ್ಲ.
	
20ನೆಯ ಶತಮಾನಕ್ಕೆ ಮುಂಚೆ ಅಮೆರಿಕದ ಕಾಂಗ್ರೆಸ್ ಕೆಲವೇ ಸಮಾಜ ಸುಧಾರಣಾ ಶಾಸನಗಳನ್ನು ಮಂಡಿಸಿತು. 1798ರಲ್ಲಿ ನಾವಿಕರ ಕೂಲಿ ಹಣದಿಂದ 20%ನ್ನು ಹಿಡಿದು ರಾಜ್ಯವಿಮಾ ನಿಧಿಗೆ ಜಮಾಮಾಡಿ, ಅವರು ಅಂಗವಿಕಲರಾದಲ್ಲಿ, ನಿರ್ಬಲರಾದಲ್ಲಿ ಆ ನಿಧಿಯಿಂದ ಪರಿಹಾರ ಕೊಡುವ ಯೋಜನೆಯನ್ನು ಸಂಯುಕ್ತರಾಷ್ಟ್ರ ಸರ್ಕಾರ ಜಾರಿಗೆ ತಂದಿತು. 1870ರಲ್ಲಿ ನಾವಿಕನ ದತ್ತಾಂಶ 20% ಇದ್ದದ್ದು 40%ಕ್ಕೆ ಹೆಚ್ಚಿತು. 1878ರಲ್ಲಿ ರಾಷ್ಟ್ರೀಯ ನಲದ್ದಿನದ (ಕ್ವಾರಂಟೀನ್) ಶಾಸನ ವಿಧಾಯಕವಾಯಿತು. ಈ ಶಾಸನ ಅಮೆರಿಕದ ಸರ್ಜನ್ ಜನರಲ್‍ನಿಗೆ ಸಂಯುಕ್ತ ಸಂಸ್ಥಾನದ ಬಂದರುಗಳಿಗೆ ಬರುವ ಜನರ ಜಹಜಗಳಲ್ಲಿ ಸಾಕಷ್ಟು ಕಾಲ ಬೇರೆಯಾಗಿ ಇರಿಸಲು ಅಧಿಕಾರ ದೊರಕಿತು. ಇದಾದ ಮರುವರ್ಷ ರಾಷ್ಟೀಯ ಆರೋಗ್ಯ ಸಮಿತಿ ಸ್ಥಾಪಿತವಾಯಿತು.
	
ಭಾರತದಲ್ಲಿ: ಭಾರತದಲ್ಲೂ ಸುಮಾರು 1860ರಿಂದೀಚೆಗೆ ಜನಾರೋಗ್ಯದ ಆಡಳಿತ ಸುಧಾರಿಸಿತೆನ್ನಬಹುದು. ಈಸ್ಟ್ ಇಂಡಿಯಾ ಕಂಪೆನಿ 1859ರಲ್ಲಿ ಜನಾರೋಗ್ಯ ಆಡಳಿತವನ್ನು ವಹಿಸಿಕೊಂಡಿತು. ಅದಕ್ಕೆ ಮುಂಚೆ ಬೇರೆಬೇರೆ ರಾಜ್ಯಗಳಲ್ಲಿ ತಮ್ಮವೇ ನಿಬಂಧನೆಗಳಿದ್ದರೂ ಆಚರಣೆಗೆ ಬಂದವು ಕೇವಲ ಅಲ್ಪ. ಆಂಗ್ಲ ಸೈನಿಕರ ಮರಣ ಪ್ರಮಾಣ ಮಿತಿಮೀರಿ ಇಂಗ್ಲೆಂಡ್‍ನ ಪಾರ್ಲಿಮೆಂಟಿನ ಗಮನಕ್ಕೆ ಬಂದದ್ದು ಈಸ್ಟ್ ಇಂಡಿಯಾ ಕಂಪನಿ ಬಂದ ಅನಂತರ. ಕೂಡಲೇ ರಾಜ ಸನ್ನದ್ದಿನ ಪ್ರಕಾರ ರಚಿತವಾದ ಒಂದು ಆಯೋಗ ಭಾರತದ ಸೈನ್ಯದಳ ಹಾಗೂ ನಾಗರಿಕರ ಅಪಾರ ಸಾವುಗಳಿಗೆ ಕಾರಣಗಳನ್ನು ತನಿಖೆ ಮಾಡಿ ಶಿಫಾರಸುಗಳೊಂದಿಗೆ ವರದಿ ಕೊಡಬೇಕೆಂದು ನೇಮಕವಾಯಿತು. 1861ರಲ್ಲಿ ಆಂಗ್ಲಸೈನಿಕರ ಸಾವುಗಳು 100ಕ್ಕೆ 69, ಭಾರತದ ಸೈನಿಕರಲ್ಲಿ ಸಾವಿರಕ್ಕೆ 20 ಇದ್ದುವು. ಜೈಲುಗಳಲ್ಲಿ ಮರಣ ಸಂಖ್ಯಾಪ್ರಮಾಣ ಸಾವಿರಕ್ಕೆ 84-120 ರವರೆಗೆ ಇದ್ದುವು. ಈ ಅಂಕಿ ಅಂಶಗಳು 1910-1914ರ ಹೊತ್ತಿಗೆ ಕ್ರಮವಾಗಿ 4.36, 4.39, 21--50ಕ್ಕೆ ಇಳಿದಿದ್ದುವು. ಸಮಿತಿ 1863ರ ವರದಿಯಲ್ಲಿ ಆರೋಗ್ಯ ನೈರ್ಮಲ್ಯಗಳ ಮೇಲ್ವಿಚಾರಣೆಗೆ ಬೇರೊಂದು ನಿಯೋಜಿತ ಮಂಡಳಿ ಆಗಬೇಕೆಂದು ಸೂಚಿಸಿತು. ಆ ಪ್ರಕಾರ ಬಂಗಾಳ, ಬೊಂಬಾಯಿ, ಮದ್ರಾಸ್ ಪ್ರಾಂತ್ಯಗಳಲ್ಲಿ ಮೊದಲಿನ ಮಂಡಳಿಗಳು ಸ್ಥಾಪನೆಯಾದುವು. ಈ ಮಂಡಳಿ ಕೂಡಲೇ ಆರೋಗ್ಯ, ನೈರ್ಮಲ್ಯಗಳನ್ನು ನೋಡಿಕೊಳ್ಳಲು ಜನಾರೋಗ್ಯ ಇಲಾಖೆಗಳು ಏರ್ಪಡಬೇಕೆಂದು ಸಲಹೆಕೊಟ್ಟಿತು. ಈ ಸಲಹೆ ಬಹಳ ವರ್ಷಗಳವರೆಗೆ ಹಾಗೇ ಇತ್ತು. ಮದ್ರಾಸಿನಲ್ಲಿ ಸ್ಥಾಪಿತವಾದ ಮಂಡಳಿ ಮಾತ್ರ ಯಶಸ್ವಿಯಾಗಿ ಕೆಲಸಮಾಡಿ ಮರಣಪ್ರಮಾಣವನ್ನು ಬಹಳಮಟ್ಟಿಗೆ ಕಡಿಮೆ ಮಾಡಲು ಕಾರಣವಾಯಿತು. 1869ರ ಹೊತ್ತಿಗೆ ಈ ಮಂಡಳಿಗಳು ನಿರ್ಬಲವಾಗಿದ್ದುವು. ಆ ಮಂಡಳಿಯ ಸದಸ್ಯ ವೈದ್ಯಾಧಿಕಾರಿ ಮಾತ್ರ ಆರೋಗ್ಯ ಮತ್ತು ನೈರ್ಮಲ್ಯಾಧಿಕಾರಿ (ಸ್ಯಾನಿಟರಿ ಕಮಿಷನರ್) ಎನಿಸಿಕೊಂಡು ಉಳಿದಿದ್ದ.
	
ಕೈಗಾರಿಕಾ ಕ್ರಾಂತಿ, ವೈದ್ಯದ ಮುನ್ನಡೆ: 18ನೆಯ ಶತಮಾನದ ಕೊನೆಯಲ್ಲೂ 19ನೆಯ ಶತಮಾನದ ಮೊದಲಲ್ಲೂ ಯಂತ್ರಸಾಧನಗಳನ್ನು ಕಂಡುಹಿಡಿದುದರ ಫಲವಾಗಿ ಅನೇಕರು ನಿರುದ್ಯೋಗಿಗಳಾಗಿ ಧಣಿಗಳಿಗೂ ಕೂಲಿಗಾರರಿಗೂ ಇದ್ದ ಪರಸ್ಪರ ಸಂಬಂಧ ವಿರಸಗೊಂಡು ಕೈಗಾರಿಕಾ ಕ್ರಾಂತಿಗೆ ಕಾರಣವಾಯಿತು. ಇದಕ್ಕೂ ಹಿಂದೆ ಕೆಲಸಗಾರರಿಗೆ ಅನ್ವಯಿಸುವ ಕಾಯಿದೆಗಳೆಲ್ಲ ಕುಲಧರ್ಮ, ಜಾತಿ ಧರ್ಮ ಇತ್ಯಾದಿಗಳ ನಂಬಿಕೆಗಳಡಿಗಲ್ಲಿನ ಮೇಲೆ ರೂಪಿತವಾಗಿದ್ದುವು. ಪ್ರಜಾಪಾಲನೆ ಮಾಡುತ್ತಿದ್ದ ರಾಜ ಪ್ರಜೆಗಳ ತಂದೆ ಎಂಬ ಭಾವನೆ ಬೆಳೆದಿತ್ತು. ಕ್ರಿ.ಶ. 643ರಲ್ಲಿ ರೊಟಾರಿ ಲೊಂಬಾರ್ಡ್ಸ್ ರಾಜ ಕಟ್ಟಡಗಳನ್ನು ಕಟ್ಟುವಾಗ ಕೂಲಿಗೆ ಅಪಘಾತವಾದಲ್ಲಿ ಅವನಿಗೆ ಪರಿಹಾರ ಕೊಡಬೇಕೆಂದು ಆಜ್ಞೆ ಮಾಡಿದ್ದ. ಇವಕ್ಕೆ ಹಿನ್ನೆಲೆಯಾಗಿ ಕೇವಲ ಮಾನವ ಹಿತಸಾಧನೆ ಇತ್ತೇ ಹೊರತು ಬೇರೇನೂ ಇಲ್ಲ. ಕೈಗಾರಿಕಾ ಕ್ರಾಂತಿಯಿಂದೀಚೆಗೆ, ಕೆಲಸಗಾರನ ಆರೋಗ್ಯದ ಕಡೆ ಗಮನ ತೀವ್ರವಾಯಿತು. ಅವನ ಕೆಲಸದ ಸ್ಥಳ, ಕೆಲಸ ಹಾಗೂ ಹುದ್ದೆಯಿಂದಾಗಿ ಬಂದ ರೋಗಗಳ ಅರಿವು ಕ್ರಮವಾಗಿ ಅನುಭವದಿಂದ ತಿಳಿದು ಬಂತು. ಉದಾಹರಣೆಗೆ, ಗಣಿಯ ಆಳದ ಕೆಲಸಗಾರನಿಗೆ ಶ್ವಾಸಕೋಶದ ಸಿಲಿಕಬೇನೆ (ಸಿಲಿಕೋಸಿಸ್), ಸೀಸ, ರೇಡಿಯಮ್ ಮತ್ತಿತರ ರಾಸಾಯನಿಕಗಳೊಂದಿಗಿನ ಕೆಲಸಗಾರರಿಗೆ ದೇಹದೊಳಕ್ಕೆ ರಾಸಾಯನಿಕ ಹೊಕ್ಕು ವಿಷವಾಗುವುದು ಇವೇ ಮೊದಲಾದ ಉದ್ಯೋಗಿಕ ರೋಗಗಳೆಂದು ಪರಿಗಣಿಸಲಾಯಿತು. ಈ ಕೈಗಾರಿಕೆ, ಉದ್ಯೋಗಗಳಿಂದಾಗಿ ಬರುವ ರೋಗದ ತನಿಖೆ, ನಿದಾನ ಮತ್ತು ಚಿಕಿತ್ಸೆ ಬಹಳಮಟ್ಟಿಗೆ ಮುಂದುವರಿದುದೇ ಈ ವಿಷಯಗಳಲ್ಲಿ ಶಾಸನಗಳಾಗಲು ಕಾರಣವಾದುವು. ಕಾರ್ಖಾನೆಗಳಿಗೂ ಅಲ್ಲಿನ ಕೆಲಸಗಾರರಿಗೂ ಅನ್ವಯಿಸುವ ಕಾಯಿದೆಗಳು, ಇತರ ಕೆಲಸಗಾರರ ಸುರಕ್ಷಣೆ ಕಾಯಿದೆ. ನೊಂದ ಕೆಲಸಗಾರರ ಪರಿಹಾರ ಕಾಯಿದೆ, ಹಾಗೂ ಉದ್ಯೋಗದಿಂದಲೇ ಬರುವ ರೋಗಗಳ ಪರಿಹಾರಕ್ಕಾಗಿ ಕಾಯಿದೆಗಳೇ ಮೊದಲು ಕೈಗಾರಿಕಾ ವಿಪ್ಲವದಿಂದಾಗಿ ಬಂದ ಮುಖ್ಯ ಶಾಸನಗಳು. ಕೈಗಾರಿಕೆಯ ವೈದ್ಯ ತಳಹದಿ ಹಾಕಿದವ ಬರ್ನಾರ್ಡಿನೊ ರಾಮಜ್ಜಿನಿ. ಈತ ಹೊರಡಿಸಿದ ಒಂದು ಗ್ರಂಥದಲ್ಲಿ (1713) ರೋಗಕ್ಕೂ ದಾರಿದ್ರ್ಯಕ್ಕೂ ಇರುವ ಸಂಬಂಧವನ್ನು ಚೆನ್ನಾಗಿ ತೋರಿದ್ದಾನೆ.
	
ರಾಮಜ್ಜಿನಿಗೆ ಮೊದಲು ಹಾಗೂ ಅನಂತರ ಅಮೂಲಾಗ್ರ ಅಧ್ಯಯನ, ಕೈಗಾರಿಕೋದ್ಯಮಗಳಿಗನ್ವಯಿಸುವ ವೈದ್ಯವಿಜ್ಞಾನವನ್ನು ಎತ್ತಿ ಹಿಡಿವ ಅನೇಕ ಪ್ರಕಟಣೆಗಳು ಹೊರಬಿದ್ದುವು. ಅವುಗಳಲ್ಲಿ ಮಹತ್ವಪೂರಿತವಾದುವು, 1473ರಲ್ಲಿ ಉಲ್ಲ್‍ರಿಕ್ ಎಲ್ಲೆನ್ಬರ್ಗ್ ಬರೆದ ಕೆಲಸಮಾಡುವ ಕಡೆ ಹುಟ್ಟುವ ವಿಷಪೂರಿತ ಹಾಗೂ ಕೆಡುಕಿನಧೂಮದ ಪರಿಣಾಮವಾಗಿ ಅಕ್ಕಸಾಲಿಗರನ್ನು ಕಾಡುವ ರೋಗಗಳು, 1556ರಲ್ಲಿ ಜೆಯಾರ್ಜಿಯಸ್ ಅಗ್ರಿಕೋಲನ ಗಣಿ ಕೆಲಸಗಾರರ ರೋಗಗಳು, 1775ರಲ್ಲಿ ಪರ್ಸಿವಾಲ್ ಪಾಟ್ ಬರೆದ ಕುಲುಮೆಗಾರರ ರೋಗಗಳು ಹಾಗೂ 1831ರಲ್ಲಿ ಚಾರಲ್ಸ್ ಟರ್ನರ್ ಥಾಕ್ರಾರವರು ಬರೆದ ಕೈಗಾರಿಕೆಗಳಿಂದೇಳುವ ರೋಗಗಳು, ಬಡತನದ ಆಮೂಲಾಗ್ರ ಅಧ್ಯಯನ --ಇವು ಮುಖ್ಯ. ಎಡ್ವಿನ್ ಚಾಡ್ವಿಕ್ ಮೊದಲಾದ ಸಮಾಜಸುಧಾರಕರು ಕಡೆಯ ವರದಿಗೆ ಬಹಳ ಮಹತ್ವ ಕೊಟ್ಟು ಅದನ್ನು ಆಧಾರವಾಗಿಟ್ಟುಕೊಂಡಿದ್ದರು.
	
ಆಕಸ್ಮಿಕಗಳು: ಅನೇಕರಿಗೆ ಕೆಲಸಮಾಡುವಾಗ ಚಿಕ್ಕಪುಟ್ಟಗಾಯಗಳು, ತೀವ್ರತರ ಗಾಯ, ಕೈ ಕಾಲು ಯಂತ್ರದಲ್ಲಿ ಸಿಕ್ಕಿಯೋ ಗಣಿಗಳಲ್ಲಿ ಮೇಲಿನಿಂದ ಒಮ್ಮೆಲೇ ಬೀಳುವ ಕಲ್ಲು ಇತ್ಯಾದಿಗಳಿಂದಲೋ ಊನವಾಗುವುದು, ಕುರುಡಾಗುವುದು, ಕಿವುಡಾಗುವುದು ಸಾಮಾನ್ಯ. ಸುರಕ್ಷಣೆಗಾಗಿ ತಕ್ಕ ಸೌಲಭ್ಯಗಳನ್ನು ಧಣಿಗಳು ಒದಗಿಸಿದ್ದರೂ ಅಪಘಾತಗಳಾಗುತ್ತವೆ. ಈ ರೀತಿಯ ಅಪಘಾತಗಳಿಗೆ ಹಣವನ್ನು ಪರಿಹಾರವಾಗಿ ಕೊಡಲು ತೀರ್ಮಾನವಾಯಿತು. ಇದಕ್ಕೆ ಮೊದಲು ಒಬ್ಬ ಕೆಲಸಗಾರ ಪರಿಹಾರ ಪಡೆಯಲು, ನ್ಯಾಯಸ್ಥಾನದಲ್ಲಿ ಅಪಘಾತಕ್ಕೆ ಧಣಿಯ ನಿರ್ಲಕ್ಷತೆಯನ್ನು ಸಾಬೀತು ಮಾಡದ ಹೊರತು ಯಾವ ಪರಿಹಾರವೂ ದೊರಕುತ್ತಿರಲಿಲ್ಲ. ಅಪಾಯವೆಂಬುದು ತಿಳಿದೂ ಕೆಲಸಗಾರನ ಅಲಕ್ಷ್ಯದಿಂದಾದ ಅಪಘಾತಕ್ಕೆ ಯಾವ ತರಹದ ಪರಿಹಾರವೂ ಇರಲಿಲ್ಲ. ಮಾಲೀಕನೇನೋ ಯಂತ್ರೋಪಕರಣಗಳನ್ನು ಸುಸಜ್ಜಿತವಾಗಿ ನ್ಯೂನತೆಗಳಿಲ್ಲದಂತೆ, ನೋಡಿಕೊಳ್ಳಬೇಕೆಂದು ನಮೂದಿಸಿತ್ತಾದರೂ ಹಾಗೆ ಅವನು ನೋಡಿಕೊಳ್ಳದೇ ಆದ ಅಪಘಾತಕ್ಕೆ ಕೆಲಸಗಾರನಿಗೆ ಪರಿಹಾರವಿರಲಿಲ್ಲ. ಮಾಲೀಕ, ಸುರಕ್ಷಣೆಗೆ ಸಂಬಂಧಿಸಿದ ಕಟ್ಟಳೆಯನ್ನು ಮೀರಿದ್ದರೂ ಅವನ ಮೇಲೆ ಯಾವ ರೀತಿಯ ಹೊಣೆಯನ್ನೂ ಹೊರಿಸುತ್ತಿರಲಿಲ್ಲ. ಇಂಗ್ಲೆಂಡಿನಲ್ಲಿ 1880 ಪಾರ್ಲಿಮೆಂಟ್ ಮಾಲೀಕರ ಹೊಣೆಗಾರಿಕೆ ಶಾಸನ ಮಂಡಿಸಿತಾದರೂ ಈ ಶಾಸನ ಕಡತದಲ್ಲೇ ಉಳಿಯಿತು. ಏಕೆಂದರೆ ಇಂಗ್ಲೆಂಡ್‍ನ ನ್ಯಾಯಸ್ಥಾನಗಳು-- ಈ ಶಾಸನದಲ್ಲಿ ಮಾಲೀಕರು ತಮ್ಮ ಕೆಲಸಗಾರರನ್ನು ಸೇರಿಸಿಕೊಳ್ಳುವ ಮುಂಚೆ ಶಾಸನದಲ್ಲಿ ಅಡಕವಾಗಿರುವ ಕಟ್ಟಳೆಗಳು ತಮಗೆ ಅನ್ವಯಿಸದೆಂದು ಒಪ್ಪಂದ ಮಾಡಿಕೊಂಡು ಕೆಲಸ ಕೊಡಲು ಅಡಚಣೆಗಳಿಲ್ಲವೆಂದೂ, ಹಾಗೆ ಮಾಡುವುದು ನ್ಯಾಯಬಾಹಿರವಲ್ಲವೆಂದೂ ಪರಿಗಣಿಸಿತು. ಜರ್ಮನಿಯಲ್ಲಿ ಬಿಸ್‍ಮಾರ್ಕ್ (1884) ಜಾರಿಗೆ ತಂದ ಪರಿಹಾರ ವಿಮಾಶಾಸನ ಮುಂಚೆ ಬಂದ ಶಾಸನಗಳಿಗೆ ಮೂಲಾಧಾರ ಮಾದರಿ ಆಯಿತು. ಇಂಗ್ಲೆಂಡಿನ ಕೆಲಸಗಾರರ ಪರಿಹಾರ ಶಾಸನ (1897). ಆಮೇಲೆ ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಜಾರಿಗೆ ಬಂದ ಶಾಸನ --ಇವೆರಡೂ ಬಿಸ್ಮಾರ್ಕ್ ಮಾಡಿದ ಶಾಸನದ ಮಾದರಿಯನ್ನು ಅನುಸರಿಸಿದ್ದುವು. 1880ರಿಂದ 1910ರೊಳಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ, ಎಲ್ಲ ಸಂಸ್ಥಾನಗಳೂ ಕೈಗಾರಿಕೋದ್ಯಮಗಳಲ್ಲಿ ಉಂಟಾಗುವ ಅಪಘಾತಗಳಿಗೆ, ಒಂದಲ್ಲೊಂದು ರೀತಿಯಲ್ಲಿ ಮಾಲೀಕರು ಜವಾಬ್ದಾರರೆಂಬ ತತ್ವ ಮನದಟ್ಟಾಗಿ ಶಾಸನಗಳಾದುವು. 1906-1908ರಲ್ಲಿ ರೈಲ್ ರಸ್ತೆ ಕೆಲಸಗಾರರಿಗೆ ಪರಿಹಾರ ದೊರಕುವಂತೆ ಮಾಡಿದ ಶಾಸನಗಳೇ ಮುಖ್ಯ. ಈ ಶಾಸನಗಳೂ ಏರುಪೇರುಗಳಿಗೊಳಗಾದರೂ ಕೊನೆಗೆ ಶಾಸನಬದ್ಧವೆಂದು ಪರಿಗಣಿಸಲಾಯಿತು.
	
ಜನತೆಯ ಸುರಕ್ಷಣೆ: 17ನೆಯ ಶತಮಾನದಲ್ಲಿ ಹೊರಬಿದ್ದ ದಾರಿದ್ರ್ಯ ನಿವಾರಣೆ ಶಾಸನ ಜಾರಿಗೆ ಬರುವ ಮುನ್ನ ದರಿದ್ರರನ್ನು ನೋಡಿಕೊಳ್ಳುವ ಜವಾಬ್ದಾರಿ ಪಾಶ್ಚಿಮಾತ್ಯ ದೇಶಗಳಲ್ಲಿ ಚರ್ಚಿನ ಹೊಣೆಯಾಗಿತ್ತು. ಭಾರತದಲ್ಲಂತೂ ದಾರಿದ್ರ್ಯ ನಿವಾರಣೆ ಎಂದರೆ ಎರಡು ಹೊತ್ತು ಊಟಕ್ಕೆ ಭಿಕ್ಷೆ ಬೇಡುವುದೇ ರೂಢಿಯಾಗಿ ಬಿಟ್ಟಿತ್ತು. ಜೊತೆಗೆ ಭಿಕ್ಷೆ ಹಾಕುವುದು ಒಂದು ಧರ್ಮಕಾರ್ಯವೆಂದು ನಂಬಿಕೆ ಇತ್ತು. ಭಾರತದಲ್ಲೆಲ್ಲ ಅದರಲ್ಲೂ ಯಾತ್ರಾಸ್ಥಳಗಳಲ್ಲಿ ಧರ್ಮಛತ್ರಗಳು ಉಚಿತವಾಗಿ ಊಟ ವಸತಿಗಳನ್ನು ಯಾತ್ರಿಕರಿಗೆ ಒದಗಿಸುವುದೇ ಅಲ್ಲ; ನಿರ್ಗತಿಕರು, ದೀನರು, ದರಿದ್ರರಿಗೆ ದಿನವೂ ಉಚಿತವಾಗಿ ಆಹಾರ ಒದಗಿಸುವುದು ಒಂದು ಸುಯೋಗವೆಂಬ ಭಾವನೆಯಿದೆ. ಹಳ್ಳಿಯಲ್ಲೂ ಮನೆಯಲ್ಲೂ ಊಟಮಾಡುವ ಸಮಯಕ್ಕೆ ಬಂದ ಅತಿಥಿ ಅಭ್ಯಾಗತರಿಗೇ ಅಲ್ಲದೆ ದೀನದರಿದ್ರರಿಗೂ ಆಹಾರ ನೀಡುವುದು ಯಜಮಾನನ ಕರ್ತವ್ಯವೆಂದು ತಿಳಿದಿದ್ದರು. ಇದರಿಂದ ಇಹಲೋಕ ಪರಲೋಕಗಳಲ್ಲಿ ಪಾಪ ವಿಶೇಷಗಳು ಕಳೆದು ಮೋಕ್ಷಕ್ಕೆ ಸಾಧನೆ ಎಂಬ ನಂಬಿಕೆ ಇತ್ತು. ಈಗಲೂ ಅನೇಕ ಸಾಂಪ್ರದಾಯಿಕ ಕುಟುಂಬಗಳಲ್ಲಿ ಇದು ಅನುವಂಶಿಕವಾಗಿ ನಡೆದುಕೊಂಡು ಬರುತ್ತಿದೆ. ಯಹೂದಿಯರಲ್ಲೂ ಇದೇ ರೀತಿಯ ಭಾವನೆಗಳನ್ನು ಕಾಣಬಹುದು. ರಾಜರು ಕೆಲವರು, ತಮ್ಮ ಅಧೀನಕ್ಕೊಳಪಟ್ಟ ಸಾಮಂತರಲ್ಲಿ ಹಾಗೂ ಶ್ರೀಮಂತರಲ್ಲಿ ಅವರವರ ಆಡಳಿತ ಕ್ಷೇತ್ರದಲ್ಲಿರುವ ದೀನದರಿದ್ರರಿಗೆ ನೆರವುಕೊಟ್ಟು ಕಾಪಾಡುವ ಜವಾಬ್ದಾರಿಯನ್ನು ಹೊರಿಸಿದ್ದರು. ಹಿಂದಿನ ಕಾಲದಿಂದಲೂ, ಸಮಾಜದಲ್ಲಿ ತಮ್ಮ ತಮ್ಮಲ್ಲೇ ಸಂಘಗಳನ್ನು ಕಟ್ಟಿಕೊಂಡು ಅನೇಕ ರೀತಿಯ ಸಾರ್ವಜನಿಕ ಹಿತದೃಷ್ಟಿಯ ಧ್ಯೇಯಗಳನ್ನು ಸಾಧಿಸುವುದು ತಿಳಿದ ವಿಚಾರ. ಉದಾಹರಣೆಗೆ ದಾರಿದ್ರ್ಯ ನೀಗಲು ಉದ್ಯೋಗ ಒದಗಿಸುವುದು. ಧರ್ಮಪಾಲನೆಗೆ ಶವಸಂಸ್ಕಾರದ ಏರ್ಪಾಟು, ವಿಧವೆ ಆದವಳು ಮತ್ತೊಬ್ಬರಿಗೆ ಹೊರೆಯಾಗದ ರೀತಿ ಅವಳಿಗೆ ಕೆಲಸದ ಹವಣಿಕೆ ಇತ್ಯಾದಿ. ಈ ರೀತಿಯ ಧರ್ಮಕಾರ್ಯಗಳು ಎಷ್ಟೇ ನಡೆಯುತ್ತಿದ್ದರೂ ಸಮಸ್ಯೆ ಬೃಹದಾಕಾರವಾದ್ದರಿಂದ ಖಾಸಗೀ ಸಂಸ್ಥೆಗಳಿಗೆ ಪರಿಹಾರ ಏರ್ಪಾಡು ಮಾಡುವುದೂ, ಎಲ್ಲೆಮೀರಿ, ಆಗದ ಕೆಲಸವಾಯಿತು. ಅದರಲ್ಲಿ ಕ್ಷಾಮ ಡಾಮರ, ಆರ್ಥಿಕ ಮುಗ್ಗಟ್ಟುಗಳೆ ಮುಂತಾದ ಕಾಲಗಳಲ್ಲಿ ನಿರುದ್ಯೋಗ ಭೀಕರಾಕಾರವನ್ನು ತಾಳಿ ದಾರಿದ್ರ್ಯ, ಹಸಿವು, ರೋಗರುಜಿನಾದಿಗಳು ತಾಂಡವವಾಡುತ್ತಿದ್ದಾಗ ಸರ್ಕಾರ ಸುಮ್ಮನೆ ಕೂಡಲಾಗಲಿಲ್ಲ. ಸಾರ್ವಜನಿಕರಿಂದ ಮೇಲಿಂದ ಮೇಲೆ ಒತ್ತಾಯ ಆರಂಭವಾಯಿತು. 16ನೆಯ ಶತಮಾನದ ಮೊದಲಲ್ಲೇ ಸರ್ ಥಾಮಸ್ ಮೋರ್ ತಮ್ಮ ಯುಟೊಪಿಯಾ ಗ್ರಂಥದಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಕಾರ್ಯಕ್ರಮಗಳು, ಸಮಾಜಾರೋಗ್ಯ ವಿಮಾ, ಸಾಮಾಜಿಕ ಭದ್ರತೆ ಕಾಪಾಡಲು ಕ್ರಮಗಳು ಹಾಗೂ ಸಾರ್ವಜನಿಕ ವಸತಿನಿರ್ಮಾಣ, ಇವೇ ಮೊದಲಾದ ಯೋಜನೆಗಳನ್ನು ಸೂಚಿಸಿದ್ದ. ಇದೇ ರೀತಿ ಡಾನಿಯಲ್ ಡೀಪೋ ಕೂಡ ಸುಧಾರಣೆಗಳನ್ನು ಸೂಚಿಸಿದ್ದ ಡೆನಿಸ್ ಡೈಡೆರೋ ಬರೆದ ವಿಶ್ವಕೋಶದಲ್ಲಿ ಆಸ್ಪತ್ರೆಗಳ ವಿಚಾರದಲ್ಲಿ ಬರೆಯುತ್ತ ಮುಪ್ಪಿನಕಾಲದ ವಿಮಾ, ವೈದ್ಯಕೀಯ ನೆರವು, ಮುಂತಾದ ಸಾರ್ವಜನಿಕ ನೆರವುಗಳ ಯೋಜನೆಗಳ ವಿಚಾರವಾಗಿ ಸ್ಥೂಲವಾಗಿ ವಿವರಿಸಿದ್ದಾನೆ.
	
ಇಂಗ್ಲೆಂಡಿನಲ್ಲಿ 1948ರ ಹೊತ್ತಿಗೆ ಎಲಿಜಬೆತ್ ಕಾಲದಿಂದಿದ್ದ ದಾರಿದ್ರ್ಯ ನಿವಾರಣ ಶಾಸನ ಮೂಲೆಗೆ ಬಿತ್ತು. ರಾಷ್ಟ್ರೀಯ ನೆರವು ಶಾಸನ ಜಾರಿಗೆಬಂದು, ಮೊದಲಿದ್ದ ಅನೇಕ ಪುರಾತನ ಕಲ್ಪನೆಗಳು ದೂರವಾದುವು. ಮೊದಲನೆಯ ಮಹಾಯುದ್ಧಕ್ಕೆ ಮೊದಲೇ, 1911ರ ರಾಷ್ಟ್ರೀಯ ಆರೋಗ್ಯ ವಿಮಾ ಶಾಸನ ಮಂಡಿತವಾಗಿತ್ತು. ಇದರಿಂದ ಕೆಲಸಗಾರ ರೋಗಿಯಾದರೆ ವೈದ್ಯಕೀಯ ನೆರವು ಬೇಕಾದರೆ, ಪರಿಹಾರ ಒದಗಿಸಬೇಕೆಂಬ ಮೂಲತತ್ವ ಅಂಗೀಕೃತವಾಗಿತ್ತು. ಆದರೆ ಈ ಪರಿಹಾರವನ್ನು ಬಳಸಲು ಕೆಲಸಗಾರರು ವಿಮಾ ಯೋಜನೆಗೆ ಒಳಪಟ್ಟಿರುವುದು ಕಡ್ಡಾಯವಾಗಿತ್ತು. ಎರಡನೆಯ ಮಹಾಯುದ್ಧದ ಕೊನೆಯಲ್ಲಿ ರಾಷ್ಟ್ರೀಯ ವಿಮಾ ಶಾಸನ (1944), ಕುಟುಂಬ ಸಂಭಾವನಾ ಶಾಸನ(1945), ರಾಷ್ಟ್ರೀಯ ಜನಾರೋಗ್ಯ ಸೇವಾ ಶಾಸನ (1946), ರಾಷ್ಟ್ರೀಯ ವಿಮಾ ಶಾಸನಗಳನ್ನು (1946) ಪಾರ್ಲಿಮೆಂಟ್ ಅಂಗೀಕರಿಸಿತು. ಇವೆಲ್ಲದರಿಂದ ಸಾರ್ವಜನಿಕ ನೆಮ್ಮದಿಯ ವಿಚಾರದಲ್ಲಿ ಸರ್ವವ್ಯಾಪಕ ಯೋಜನೆಗೆ ವಾತಾವರಣ ಚೆನ್ನಾಗಿತ್ತು.
	
ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 1953ರ ಹೊತ್ತಿಗೆ ಆರೋಗ್ಯ, ವಿದ್ಯೆ, ಸುರಕ್ಷಣೆಯ ಬೇರೆ ಇಲಾಖೆಯೇ ರೂಪುಗೊಂಡರೂ, ಅನೇಕ ಸಮಾಜ ಶಾಸನಗಳು ಸಂಯುಕ್ತ ರಾಷ್ಟ್ರ ಸರ್ಕಾರ ಹಾಗೂ ಸಂಸ್ಥಾನಗಳ ಪರಸ್ಪರ ಸಹಕಾರದ ಮೇಲೆ ನಿಂತಿತ್ತು. ಇವು ಪೂರ್ಣ ರಾಷ್ಟ್ರೀಯ ಸ್ವತ್ತಾಗಿರಲಿಲ್ಲ. ಮುಖ್ಯವಾಗಿ ಸಂಯುಕ್ತ ರಾಷ್ಟ್ರ ಸರ್ಕಾರ ಸಂಸ್ಥಾನಗಳಿಗೆ ಸಹಾಯ ದ್ರವ್ಯವನ್ನು ಒದಗಿಸುತ್ತಿತ್ತು. ಉದಾಹರಣೆಗೆ ಬಾಣಂತಿ, ಶಿಶುಶಾಸನ (1921), ರಾಷ್ಟ್ರೀಯ ಶಾಲಾ ಉಪಹಾರ ಶಾಸನ (1946) ಇವು ಪರಸ್ಪರ ಸಹಕಾರದಿಂದ ಬದ್ಧವಾದ ಶಾಸನಗಳು. ಇಂಗ್ಲೆಂಡ್, ಸ್ಕಾಂಡಿನೇವಿಯ ದೇಶಗಳಷ್ಟು ಕಲ್ಯಾಣರಾಜ್ಯ ಸ್ಥಾಪನೆಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಮುಂದುವರಿದಿಲ್ಲವೆಂದು ಹೇಳಬಹುದು. ಆದರೂ ಎಲ್ಲ ಸಮಾಜ ಶಾಸನಕ್ಕೂ ವಿಮಾ ತತ್ವವನ್ನು ಅನ್ವಯಿಸಬೇಕೆಂಬ ಅಭಿಪ್ರಾಯ ರೂಪಗೊಳ್ಳುತ್ತಿರುವ ಹಾಗೆ ಕಂಡುಬರುತ್ತದೆ.
	
1930ರ ಆರ್ಥಿಕ ಮುಗ್ಗಟ್ಟು, ಸಾರ್ವಜನಿಕರಿಗೆ ನೆರವು, ನಿರುದ್ಯೋಗ ಪರಿಹಾರ, ಸಾಮಾಜಿಕ ಭದ್ರತಾ ವೇತನ ಕೆಲವು ಸಾರ್ವಜನಿಕ ನೆಮ್ಮದಿಯ ರಕ್ಷಣಾ ಕಾಯಿದೆಗಳಿಗೆ ದಾರಿಮಾಡಿ ಕೊಟ್ಟಿತು. ಈ ಕಾಯಿದೆಗಳು ಇಡೀ ರಾಷ್ಟ್ರಕ್ಕೆ ಅನ್ವಯಿಸುವ ಕಾಯಿದೆಗಳು. ಸಮಾಜ ಸುಧಾರಣಾ ಕಾಯಿದೆಗಳ ಪೈಕಿ ಸಮಾಜದ ಭದ್ರತೆ ಕಾಪಾಡಲು ಹಾಗೂ ನ್ಯಾಯಸಮ್ಮತವಾದ ಕಾರ್ಮಿಕರ ಸೇವಾಸ್ಥಿತಿಗಳನ್ನು ನಿಗದಿ ಮಾಡುವ ಶಾಸನಗಳೂ ಮುಖ್ಯವಾದುವು.
	
1937ರ ಆರಂಭದಲ್ಲಿ ಅಮೆರಿಕ ವರಿಷ್ಠ ನ್ಯಾಯಾಲಯ ಕಾಂಗ್ರೆಸ್ಸಿಗೆ ಶಾಸನಗಳನ್ನು ಮಾಡುವ ಪೂರ್ಣಹಕ್ಕು ಇದೆ ಎಂದು ಸಾರಿತು. ಆದರೂ ಈ ಶಾಸನಗಳ ಸತ್ವದಲ್ಲೂ ಕಾರ್ಯಕ್ರಮಗಳಲ್ಲೂ ನ್ಯೂನತೆಗಳೂ ಲೋಪದೋಷಗಳು ಇದ್ದೆ ಇದ್ದುವು. ಸಂಸ್ಥಾನಗಳ ರಾಜ್ಯಾಂಗಗಳಲ್ಲಿ ಅಡಕವಾಗಿರುವ ಹಕ್ಕು ಬಾಧ್ಯತೆಗಳ ಮೇಲೆ ಸಂಸ್ಥಾನಗಳಲ್ಲಿರುವ ನ್ಯಾಯಾಂಗ- ಶಾಸನಗಳು ನ್ಯಾಯಸಮ್ಮತ ಅಥವಾ ಅಸಮ್ಮತವೆಂದು ನಿರ್ಧಾರ ಮಾಡುತ್ತವೆ. ಆದರೆ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಶಾಸನಗಳನ್ನು ಆಚರಣೆಗೆ ತರುವಾಗ ಮಾತ್ರ ಅನೇಕ ನ್ಯೂನತೆಗಳು ಕಂಡುಬಂದಿವೆ. ಶಾಸನದ ವಿಧಿಗಳನ್ನು ಚಲಾಯಿಸಲು ಆಧಿಕಾರವನ್ನು ನ್ಯಾಯಾಂಗದಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ವಹಿಸಿಕೊಡುವುದು, ಪ್ರತಿಯೊಂದಕ್ಕೂ ನಿಗದಿಯಾದ ಪ್ರಮಾಣ, ದರ್ಜೆಯನ್ನೂ ನಿರ್ಧರಿಸಿ ಆಡಳಿತ ವ್ಯವಹಾರಗಳಲ್ಲಿ ತಾವೇತಾವಾಗಿ ವರ್ತಿಸಲು ಎಡೆಯಿಲ್ಲದಂತೆ ಮಾಡುವುದೂ ಇನ್ನೂ ಅನೇಕ ವಿಧದ ಲೋಪದೋಷಗಳ ಪರಿಹಾರ ಅಗತ್ಯವೆಂದು ಕಂಡುಬಂದಿತು. ಸಂಸ್ಥಾನದ ಶಾಸನಗಳನ್ನು ಉಲ್ಲಂಘಿಸಿದಾಗ ಆರೋಗ್ಯಾಧಿಕಾರಿಗಳು ಅನೇಕ ವಿಧದ ಕಾರ್ಯಕ್ರಮ ಕೈಗೊಳ್ಳಬೇಕಾಗುತ್ತದೆ. ಉದಾಹರಣೆಗೆ, ತನಿಖೆ, ಕೆಡುಕಾಗಿಸುವ ವಸ್ತುಗಳ, ಜಾಡ್ಯವನ್ನು ಇತರರಿಗೆ ಹರಡಬಲ್ಲ ಪದಾರ್ಥಗಳ ನಾಶ, ಸಾರ್ವಜನಿಕ ಸ್ಥಳಗಳನ್ನು (ಸಿನಿಮಾ, ಹೋಟೆಲ್ ಇತ್ಯಾದಿ) ಮುಚ್ಚುವುದು, ನಿವೇಶನ, ವಸ್ತು ಮುಂತಾದುವಲ್ಲಿ ಸೋಂಕುಕಳೆತ, ಪ್ರತಿಬಂಧಕ ಚುಚ್ಚುಮದ್ದನ್ನು ಹಾಕುವುದು, ರೋಗಿಯೊಡನೆ ಇದ್ದವರನ್ನು ಬೇರೆಯಾಗಿ ಇರಿಸುವುದು, ಇವೇ ಮೊದಲಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಕ್ರಮಗಳಿಂದ ನೊಂದವನಿಗೆ ಪರಿಹಾರ ಕೊಟ್ಟರೇ ಸಾಕೇ? ನೊಂದವನ ದೃಷ್ಟಿಯಿಂದ ತೆಗೆದುಕೊಂಡ ಕಾರ್ಯಕ್ರಮ ಅನುಚಿತ, ಅಸಂಬದ್ಧ ಎಂದಿದ್ದರೆ ಅವನು ನ್ಯಾಯಾಲಯದ ಆಶ್ರಯ ಹೊಂದಬಹುದೇ? ಹಾಗೆ ಹೊಂದಿದರೆ ಅದುವರೆಗೆ ಕ್ರಮ ತೆಗೆದುಕೊಳ್ಳುವುದನ್ನು ಮುಂದೂಡಿ ನ್ಯಾಯಾಲಯದ ತೀರ್ಮಾನಕ್ಕೆ ಕಾದಿರಬಹುದೇ? ಇದು ಸಾರ್ವಜನಿಕ ಹಿತದೃಷ್ಟಿಯಿಂದ ಉಚಿತವೇ? ಒಂದು ಸಾಂಕ್ರಾಮಿಕ ಜಾಡ್ಯವಿದ್ದಾಗ ಆ ಮನೆಯ ಯಜಮಾನ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸದಿದ್ದರೆ, ಅದರಿಂದ ಆಗುವ ಅನಾಹುತ ಎಲ್ಲರಿಗೂ ತಿಳಿದ ವಿಷಯ. ಹೀಗಿದ್ದೂ ಯಜಮಾನ ವರದಿ ಮಾಡದಿದ್ದರೆ ಶಿಕ್ಷೆ ಕೇವಲ ಜುಲ್ಮಾನೆಯೇ ಅಥವಾ ಇನ್ನೂ ಕಡುತರವಾದ ಕ್ರಮವೋ? ಇಷ್ಟೆಲ್ಲ ಶಿಕ್ಷೆಗೆ, ಅನಾನುಕೂಲತೆಗಳಿಗೆ, ಒಳಪಡಿಸಿದ ಅನಂತರ ಕಾರ್ಯಕ್ರಮ ಬೇಕಿರಲಿಲ್ಲವೆಂದು ಗೊತ್ತಾದಲ್ಲಿ ಅದಕ್ಕೆ ಯಾರು ಹೊಣೆ, ಈ ವಿಚಾರಗಳೆಲ್ಲಾ ಬಹಳ ಯೋಚಿಸಿ ಹಿಂದು ಮುಂದು ತಿಳಿದು, ಸಾರ್ವಜನಿಕ ಹಿತದೃಷ್ಟಿಯಿಂದ ಏನೇನು ಕ್ರಮ ಅತ್ಯಗತ್ಯವೋ ಅದನ್ನು ತೆಗೆದುಕೊಳ್ಳದೇ ಬೇರೆ ಮಾರ್ಗವೇ ಇಲ್ಲ.
	
ಆಹಾರ, ಔಷಧಿಗಳ ಕೀಳ್ಬೆರಕೆ: ಇಡೀ ಆರೋಗ್ಯಕ್ಷೇತ್ರದಲ್ಲೇ, ಆಹಾರ, ಔಷಧಗಳ ಕೀಳ್ಬೆರಕೆಗೆ (ಅಡಲ್ಟರೇಷನ್) ಸಂಬಂಧಿಸಿದ ಶಾಸನಗಳು ಅತಿ ಮುಖ್ಯ. ಪ್ರಾಚೀನ ಭಾರತದಲ್ಲಿ, ಕೀಳ್ಬೆರಕೆಯನ್ನು ತಪ್ಪಿಸಲು ರೂಪಿತವಾದ ಶಾಸನಗಳಿಲ್ಲದಿದ್ದರೂ, ರಾಜಮಹಾರಾಜರ ಆಡಳಿತದಲ್ಲಿ ಆಹಾರ ಕೀಳ್ಬೆರಕೆ ಮಾಡಿದರೆ ಅತ್ಯುಗ್ರದಂಡವನ್ನು ವಿಧಿಸಲಾಗುತ್ತಿತ್ತು. ತಪ್ಪಿತಸ್ಥನ ಕೈಗಳನ್ನೂ ಕತ್ತರಿಸಲು ಆಜ್ಞೆ ಹೊರಡುತ್ತಿತ್ತಂತೆ. ರೋಮ್, ಅಥೆನ್ಸ್‍ಗಳಲ್ಲಿ ಹಿಂದೆ ಮಾದಕ ಪದಾರ್ಥಗಳಿಗೆ ಕೀಳ್ಬೆರಸುವುದನ್ನು ನಿಷೇಧಿಸುವ ಶಾಸನಗಳಿದ್ದುವು.
	
ಇಂಗ್ಲೆಂಡಿನಲ್ಲಿ ಮೂರನೆಯ ಹೆನ್ರಿ ರಾಜನಾಗಿದ್ದಾಗಿನಿಂದಲೂ ಕೆಲವು ಆಹಾರಗಳ ಕೀಳ್ಬೆರಕೆ ನಿಷೇಧಿಸಲಾಗಿತ್ತು. ಟೀ, ಕಾಫಿ, ಬೀರ್ ಮಾದಕಗಳ ಕೀಳ್ಬೆರಕೆ ನಿರ್ಬಂಧಿಸಲು ಪಾರ್ಲಿಮೆಂಟ್ ಆಗಾಗ್ಗೆ ಶಾಸನಗಳನ್ನು ಮಂಡಿಸುತ್ತಿತ್ತು. ಆಹಾರ ಕೀಳ್ಬೆರಕೆ ಶಾಸನ (1872) ಜಾರಿಗೆ ಬಂತು. ಇದರಿಂದ ಆಹಾರಪದಾರ್ಥಗಳನ್ನು ವಶಪಡಿಸಿಕೊಂಡು ಅವನ್ನು ತಜ್ಞರಿಂದ ಪರೀಕ್ಷೆ ಮಾಡಿಸಿ ಅವು ಕೀಳ್ಬೆರಕೆ ಎಂದು ರುಜವಾತಾದಲ್ಲಿ 50 ಪೌಂಡುಗಳ ದಂಡ ವಿಧಿಸಲು ಸಾಧ್ಯವಾಯಿತು. ಹಾಗೂ ಎರಡನೆಯ ಸಲ ಕೀಳ್ಬೆರಕೆ ಮಾಡಿ ಸಿಕ್ಕಿ ಬಿದ್ದಾಗ 6 ತಿಂಗಳ ಕಾರಾಗೃಹವಾಸ, ಕಠಿಣ ಸಜ ವಿಧಿಸಲು ಅವಕಾಶವಿತ್ತು. ಈ ಶಾಸನದ ವ್ಯಾವಹಾರಿಕ ಲೋಪದೋಷಗಳನ್ನು ಸರಿಪಡಿಸಿ ಒಂದು ಸರ್ವವ್ಯಾಪಕ ಆಹಾರ ಮತ್ತು ಔಷಧಿಗಳ ಕೀಳ್ಬೆರಕೆ, ಪ್ರತಿಬಂಧಕ ಶಾಸನ (1955) ಜಾರಿಗೆ ಬಂತು.
	
ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಕಾಂಗ್ರೆಸ್ ಔಷಧಿಗಳ ಕೀಳ್ಬೆರಕೆ ವಿರುದ್ಧ ಶಾಸನವನ್ನು ಮಂಡಿಸಿತು. 1880ರಿಂದ 1906ರಲ್ಲಿ 103 ಮಸೂದೆಗಳು ಕೇವಲ, ಅಂತರರಾಜ್ಯದ ಆಹಾರ, ಔಷಧಗಳ ಸಾಗಾಣಿಕೆಗೆ ಅನ್ವಯಿಸುವ ಕಾಯಿದೆಗಳೇ ಆಗಿದ್ದುವು. ಆದರೆ 1906ರಲ್ಲಿ ಅಧ್ಯಕ್ಷ ರೂಸ್‍ವೆಲ್ಟ್ ಶುದ್ಧ ಆಹಾರ, ಔಷಧಿಗಳ ಶಾಸನಕ್ಕೆ ಸಹಿ ಹಾಕಿ ಅದು ಅಂಗೀಕಾರ ಆಗುವವರೆಗೆ ಈ ಮಸೂದೆಗಳು ಯಾವವೂ ಸ್ವೀಕೃತವಾಗಲಿಲ್ಲ. ಈ ಶಾಸನ ಅಂಗೀಕಾರವಾದ ಮೇಲೂ ಅದರಲ್ಲಿ ನಿಯಮಿತವಾದ ವಿಧಿಗಳನ್ನು ಜಾರಿಗೆ ತರಲು ಅನೇಕ ತೊಡಕುಗಳು ಕಂಡುಬಂದುವು. ಕೀಳ್ಬೆರಕೆ ಎಂಬ ಪದದ ಅರ್ಥ ಸಾಕಷ್ಟು ವ್ಯಾಪಕವಾಗದಿರುವುದು ಒಂದು ಕಾರಣ. ವಿಧಿಸುತ್ತಿದ್ದ ಶಿಕ್ಷೆ ಅಂದರೆ ಮೊದಲ ಉಲ್ಲಂಘನೆಗೆ 20 ಪೌಂಡುಗಳ ದಂಡ, ಎರಡನೆಯದಕ್ಕೆ 300 ಪೌಂಡುಗಳ ದಂಡ ಅಥವಾ ಒಂದು ವರ್ಷ ಸಜಾ, ವ್ಯಾಪಾರಿಗಳಲ್ಲಿ ಸಾಕಷ್ಟು ಭಯ ಹುಟ್ಟಿಸುವಂತಿರಲಿಲ್ಲವೆಂಬುದು ಎರಡನೆಯ ಕಾರಣ.
	
1937ರಲ್ಲಿ ಒಂದು ವಿಷಾದಕರ ಪ್ರಸಂಗ ಗಮನಕ್ಕೆ ಬಂತು. ಎಲಿಕ್ಸರ್ ಸಲ್ಫೊನೇಮೈಡ್ ಮದ್ದನ್ನು ಹಂಚಿಕೆ ಹಾಗೂ ಮಾರಾಟವನ್ನು ನಿಯಂತ್ರಿಸುವ ಕಾಯಿದೆ ಯಾವುದೂ ಇರಲಿಲ್ಲ. 1938ರಲ್ಲಿ ಸಂಯುಕ್ತ ರಾಷ್ಟ್ರ ಸರ್ಕಾರದ ಆಹಾರ, ಔಷಧ ಮತ್ತು ಕಾಂತಿವರ್ಧಕಗಳ ಶಾಸನ (ಫೆಡರಲ್ ಪುಡ್, ಡ್ರಗ್ ಅಂಡ್ ಕಾಸ್ಮೆಟಿಕ್ ಆಯಕಟ್ 1938) ಜಾರಿಗೆ ಬಂತು. ಇದರಿಂದ ಆರೋಗ್ಯಕ್ಕೆ ಧಕ್ಕೆ ಬರುವ ಆಹಾರ ಹಾಗೂ ಮದ್ದನ್ನು ಕೊಳಕು ಅಥವಾ ಸೋಂಕಿನಿಂದ ಕೂಡಿಸುವ ಸೀಸೆ, ಪಾತ್ರೆ, ಪೆಟ್ಟಿಗೆ ಇತ್ಯಾದಿಗಳಲ್ಲಿ ಹಾಕಿ ಮಾರುವುದನ್ನು ನಿಷೇಧಿಸಲಾಯಿತು. ಈ ಆಜ್ಞೆಗಳನ್ನು ಉಲ್ಲಂಘಿಸಿದವರಿಗೆ 1000 ಪೌಂಡು ಅಥವಾ ಒಂದು ವರ್ಷ ಕಠಿಣ ಸಜಾ ವಿಧಿಸಲು ಅವಕಾಶ ಕಲ್ಪಿಸಿಕೊಡಲಾಯಿತು. ಅಂತರರಾಷ್ಟ್ರೀಯ ಮಟ್ಟದ ಮೋಸಕ್ಕೆ ಅಥವಾ ಎರಡನೆಯ ಸಲ ಕಾಯಿದೆ ವಿರುದ್ಧ ನಡೆದರೆ 10,000 ಪೌಂಡುಗಳ ದಂಡ ಇಲ್ಲದಿದ್ದಲ್ಲಿ 3 ವರ್ಷ ಕಠಿಣ ಸಜಕ್ಕೆ ಅವಕಾಶವಿತ್ತು. ಈ ಶಾಸನವನ್ನು ಜಾರಿಗೆ ತಂದದ್ದೇ ಅಲ್ಲದೆ ಕಟ್ಟುನಿಟ್ಟಾಗಿ ಆಚರಣೆಗೆ ತರಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು.
	
ಸಾರ್ವಜನಿಕ ಕ್ಷೇಮರಕ್ಷಣಾ ಕಾಯಿದೆಗಳು: ಸಾರ್ವಜನಿಕ ಆರೋಗ್ಯ ರಕ್ಷಣಾ ಕಾಯಿದೆಗಳು ಹಾಗೂ ನೊಂದ ಕೆಲಸಗಾರರಿಗೆ ಪರಿಹಾರ ನೀಡುವ ಕಾಯಿದೆಗಳ ಜೊತೆಗೇ ಸಾರ್ವಜನಿಕ ಕ್ಷೇಮರಕ್ಷಣಾ ಕಾಯಿದೆಗಳೂ ಜಾರಿಗೆ ಬಂದವೆಂದು ಹೇಳಬಹುದು. ಅಪ್ರೇರಿತ ಸ್ವಯಂಸೇವಕ ಮಂಡಳಿಗಳು ಹೆಚ್ಚು ಆಸಕ್ತಿವಹಿಸಿ ಜನಗಳಿಗೆ ತಿಳಿವಳಿಕೆ ಕೊಟ್ಟು ತಾವೇ ಚಟುವಟಿಕೆಗಳನ್ನು ವ್ಯವಸ್ಥೆ ಮಾಡಿದುವು. 20ನೆಯ ಶತಮಾನದಲ್ಲಂತೂ ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಇಂಜಿನೀಯರು ಅನೇಕ ವಿಧದ ರಕ್ಷಣೆಗಳನ್ನು ನಿರೂಪಿಸಿ ಆಚರಣೆಗೆ ತಂದಿದ್ದಾರೆ. ಹಾಗೂ ಕೆಲಸಗಾರ ಆದಷ್ಟು ಸುರಕ್ಷಿತವಾಗಿರಲು ಸೂತ್ರಗಳನ್ನು ವಿಧಿಸಿದ್ದಾರೆ. ಈ ಸೂತ್ರಗಳನ್ನು ಪಾಲಿಸಿದ್ದೇ ಆದರೆ ಕೆಲಸಗಾರ ಬಹುಮಟ್ಟಿಗೆ ಅಪಾಯವೇ ಇಲ್ಲದಂತಿರಬಹುದು. ಇದರಿಂದ ಮಾಲೀಕರೂ ತಮ್ಮ ನುರಿತ ಕೆಲಸಗಾರರಿಂದ ಪೂರ್ಣ ಪ್ರಯೋಜನ ಪಡೆಯುವಂತಾಯಿತು. ಈ ಉದ್ದೇಶದಿಂದಲೇ ಫ್ಯಾಕ್ಟರಿಗಳಲ್ಲಿ ಆವಿಯ ಕುದಿ ಪಾತ್ರೆಗಳನ್ನು ಪರಿಶೀಲಿಸುವುದು ಮೊದಮೊದಲಲ್ಲಿ ರೂಢಿಗೆ ಬಂತು. ಅನಂತರ ಮನೆ ಕಟ್ಟುವ ಮುನ್ನ, ಗಿರಣಿಗಳನ್ನು ಸ್ಥಾಪಿಸುವ ಮೊದಲು ಪೌರಸಭೆಯ ಅಧಿಕಾರಿ ಬಂದು ಕೂಲಂಕಷವಾಗಿ ಪರಿಶೀಲಿಸಿದ ಮೇಲೆ ಕಾರ್ಯ ಪ್ರಾರಂಭ ಮಾಡಲು ಅಪ್ಪಣೆ ದೊರೆಯುತ್ತಿತ್ತು. ಗಣಿಗಳಲ್ಲಿ ಕೆಲಸ ಮಾಡುವವರ ಸಂರಕ್ಷಣೆ, ರೈಲುದಾರಿಗಳನ್ನು ನಿರ್ಮಿಸುವ ಕೆಲಸಗಾರರ ಸಂರಕ್ಷಣೆ ಕಡ್ಡಾಯ ಮಾಡುವ ಕಾನೂನುಗಳು 1887ರಲ್ಲಿ ಜಾರಿಗೆ ಬಂದು ಕ್ರಮೇಣ 1893, 1903, 1910 ಮತ್ತು 1920ರಲ್ಲಿ ವಿಸ್ತಾರವಾಗಿ ತಿದ್ದುಪಡಿಗಳಾಗಿ ಸಂಯುಕ್ತ ರಾಷ್ಟ್ರ ಸರ್ಕಾರದ ಮೊದಲಿನ ಮಹತ್ವದ ಶಾಸನವಾದುವು. 1936ರ ವಾಲ್ಯ್ ಹೀಲಿ ಸಾರ್ವಜನಿಕ ಗುತ್ತಿಗೆದಾರರಿಗೆ ಅನ್ವಯಿಸುವ ಶಾಸನದ ಪ್ರಕಾರ, ಪ್ರತಿಯೊಬ್ಬ ಸರ್ಕಾರದ ಕೆಲಸವನ್ನೊಪ್ಪಿಕೊಂಡಿರುವ ಗುತ್ತಿಗೆದಾರನೂ ಆಯಾ ಸಂಸ್ಥಾನದಲ್ಲಿ ಜಾರಿಯಲ್ಲಿರುವ ಆರೋಗ್ಯ ರಕ್ಷಣಾ ಮತ್ತು ಕ್ಷೇಮ ರಕ್ಷಣಾ ಕಾಯಿದೆಗೆ ಒಳಪಟ್ಟು ಕೆಲಸ ಮಾಡಬೇಕು ಎಂದು ತೀರ್ಮಾನವಾಯಿತು. ಈ ಕಾನೂನುಗಳ ಮಹತ್ವವನ್ನು ಮಾಲೀಕರು ಅರಿತಿದ್ದಾರೆ; ಅದರಲ್ಲಿ ಅಡಕವಾಗಿರುವ ಸೂತ್ರಗಳ ಪಾಲನೆಯನ್ನು ಈ ಆಧುನಿಕ ಮಾಲೀಕರು ತಮ್ಮ ಕರ್ತವ್ಯವೆಂದು ಪರಿಗಣಿಸಿ ಕೆಲಸಗಾರರಿಗೆ ಪೂರ್ಣ ರಕ್ಷಣೆ ಕೊಡುವುದರಲ್ಲಿ ಸಫಲರಾಗಿದ್ದಾರೆ. ಅಮೆರಿಕದ ಕೈಗಾರಿಕೋದ್ಯಮಗಳಲ್ಲಿ ಅಪಘಾತಗಳಿಗೆ ಎಡೆ ಇಲ್ಲದಂತೆ ಸೂತ್ರಗಳನ್ನು ಅಪಘಾತವನ್ನು ತಡೆಗಟ್ಟಲು ಚಳವಳಿ ಎಲ್ಲೆಲ್ಲಿಯೂ ಕಂಡುಬಂತು. ಅಂತರರಾಷ್ಟ್ರೀಯ ಕೈಗಾರಿಕಾ ಅಪಘಾತ ನಿರ್ಬಂಧ ಸಂಘ ಹಾಗೂ ನಿಯೋಜಿತ ಆಯೋಗ ಈ ಚಳವಳಿಯ ಮೇಲೆ ಪ್ರಭಾವ ಬೀರಿತು. ಅಮೆರಿಕ ಸಂಯುಕ್ತಸಂಸ್ಥಾನಗಳ ಕಾರ್ಮಿಕ ಇಲಾಖೆ ಹಾಗೂ 1953ರಿಂದ ಆರೋಗ್ಯ, ವಿದ್ಯಾ ಮತ್ತು ನೆಮ್ಮದಿ ಇಲಾಖೆ ಕೈಗಾರಿಕೋದ್ಯಮಗಳಿಗೊಳಪಟ್ಟ ಕೆಲವು ಕ್ಷೇಮ ರಕ್ಷಣೆಗೆ ಹೊಣೆಯಾಗಿವೆ. ಗಣಿಗಳಲ್ಲಿ ಅಪಘಾತವಾಗದಂತೆ ಆಗಾಗ್ಗೆ ಅಧಿಕೃತ ಪರಿಶೀಲನೆ ನಡೆಸಬೇಕು ಹಾಗೂ ಸುರಂಗದ ಮೇಲ್ಭಾಗ ಕುಸಿಯದಿರಲು, ಸ್ವಚ್ಛ ಗಾಳಿ, ಉಪಯೋಗ ಮಾಡುವ ಸಲಕರಣೆಗಳ ಸ್ಥಿತಿ, ಬೆಂಕಿಯಿಂದ ರಕ್ಷಣೆ ಮೊದಲಾದವು ಯಾವ ರೀತಿ ಇರಬೇಕೆಂಬುದನ್ನು ಕಾನೂನು ನಿರ್ದಿಷ್ಟ ರೀತಿಯಲ್ಲಿ ನಿಗದಿಮಾಡಿದೆ. 1920ಕ್ಕೆ ಮುಂಚೆ ನೊಂದ ಕೆಲಸಗಾರರು ನ್ಯಾಯಾಲಯಕ್ಕೆ ಹೋಗಿ ತನಗೆ ಸಂಭವಿಸಿದ ಅಪಘಾತಕ್ಕೆ ಪರಿಹಾರವನ್ನು ಬೇಡಿಕೊಳ್ಳಬೇಕಾಗಿತ್ತು. ಅನಂತರ ಈ ಪರಿಹಾರವನ್ನು ಕೊಡಲು ಆಯಾ ಕೈಗಾರಿಕೆಗೆ ಸಂಬಂಧಪಟ್ಟ ಅಧಿಕೃತ ಮಂಡಳಿಗಳೇ ಕಾನೂನು ರೀತ್ಯಾ ಅರ್ಹತೆ ಪಡೆದವು.
ಕೇವಲ ಕೈಗಾರಿಕೋದ್ಯಮಗಳಲ್ಲಿ ಒದಗಬಹುದಾದ ಅಪಘಾತಗಳನ್ನು ತಡೆಗಟ್ಟುವ ನಿಬಂಧನೆಗಳೇ ಅಲ್ಲದೇ ಇನ್ನೂ ಅನೇಕ ರೀತಿಯ ಸುರಕ್ಷಣಾ ಕಾನೂನುಗಳು ಜಾರಿಗೆ ಬಂದುವು. ಉದಾಹರಣೆಗೆ ಜನವಾಹನ ಸಂಚಾರಗಳನ್ನು ನಿಯಂತ್ರಿಸುವ, ಸಿನಿಮಾ ಮಂದಿರಗಳಿಗೆ ಅನ್ವಯಿಸುವ, ಶಾಲೆಗಳಿಗೆ ಅನ್ವಯಿಸುವ ಹೆದ್ದಾರಿ, ಪಕ್ಕದಾರಿ, ಸಾರ್ವಜನಿಕ ವಾಹನ, ಸ್ನಾನಮಾಡುವ ತೀರಪ್ರದೇಶ, ಬೆಂಕಿ ಅನಾಹುತ ಮುಂತಾದವುಗಳಿಗೆ ಅನ್ವಯಿಸುವ ಕಾಯಿದೆಗಳೂ ಬಂದುವು.
	
ಭಾರತದಲ್ಲಿಯೂ ಆರೋಗ್ಯ ಮತ್ತು ಸಮಾಜ ಕಲ್ಯಾಣ ಹಾಗೂ ಜನತೆಯ ಕ್ಷೇಮರಕ್ಷಣಾ ಶಾಸನಗಳು ಅನೇಕವಿವೆ. ಭಾರತದ ರಾಜ್ಯಾಂಗ 1935ರ ಭಾರತ ಸರ್ಕಾರ ಶಾಸನವನ್ನು ಅಂಗೀಕಾರ ಮಾಡಿದೆ. ಈ ಶಾಸನದಲ್ಲಿ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿಗಳನ್ನು ಮತ್ತು ಶಾಸನಗಳ ವ್ಯಾಪ್ತಿಯನ್ನು ನಿರ್ದಿಷ್ಟವಾಗಿ ನಿರ್ದೇಶಿಸಿದೆ. ಅದೂ ಅಲ್ಲದೆ ಕೆಲವು ಸಮಾನ ಅಧಿಕಾರವುಳ್ಳ ವಿಷಯಗಳ ಪಟ್ಟಿಯನ್ನೂ ನಮೂದಿಸಲಾಗಿದೆ. ಅಂದರೆ ಯಾವುದಾದರೂ ಒಂದು ಶಾಸನ ಅಂಗೀಕಾರವಾದರೆ ಆ ಶಾಸನ ಕಡ್ಡಾಯವಾಗಿದ್ದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಆ ಶಾಸನವನ್ನು ಆಚರಣೆಗೆ ತರುತ್ತವೆ. ಕಡ್ಡಾಯವಲ್ಲದಿದ್ದರೆ, ರಾಜ್ಯಸರ್ಕಾರಗಳು ಆ ಶಾಸನವನ್ನು ಸ್ವೀಕಾರಮಾಡುವ ಅಥವಾ ಮಾಡದಿರುವ ಅಧಿಕಾರವನ್ನು ಹೊಂದಿವೆ. ಈ ಸಂದರ್ಭಗಳಲ್ಲಿ ರಾಜ್ಯ ಸರ್ಕಾರ, ಶಾಸನವನ್ನು ಆಚರಣೆಗೆ ತರಬಹುದು. ಅಥವಾ ತರದೆ ಇರಬಹುದು. ಉದಾಹರಣೆಗೆ ಆಹಾರದ ಕೀಳ್ಬೆರಕೆ ತಡೆಗಟ್ಟುವ ಶಾಸನ (1954) ಭಾರತದ ಎಲ್ಲ ಭಾಗಗಳಿಗೂ ಕಡ್ಡಾಯವಾಗಿ ಅನ್ವಯಿಸುವ ಶಾಸನ. ಆದರೆ ಭಾರತದ ಸಾಂಕ್ರಾಮಿಕ ಜಾಡ್ಯ ಹತೋಟಿ ಶಾಸನ (1857) ಕಡ್ಡಾಯ ಶಾಸನವಲ್ಲ. ಅದು ಕೇವಲ ಸ್ವೀಕಾರಾರ್ಹ ಶಾಸನವಷ್ಟೆ.
	
ಭಾರತ ಸರ್ಕಾರ ಹಾಗೂ ರಾಜ್ಯಸರ್ಕಾರಗಳು ಜಾರಿಗೆ ತಂದಿರುವ ಕೆಲವು ಮುಖ್ಯ ಆರೋಗ್ಯ ಮತ್ತು ಸಮಾಜ ಕಲ್ಯಾಣ ಶಾಸನಗಳನ್ನು ಈ ಕೆಳಗೆ ಕೊಡಲಾಗಿದೆ.
	
1 ರೋಗಿಗಳ ಮತ್ತು ರೋಗಿಗಳೊಂದಿಗೆ ಸಂಪರ್ಕ ಹೊಂದಿದವರನ್ನು ಪ್ರತ್ಯೇಕ ಮಾಡಿ ಅವರ ಚಲನವಲನಗಳ ಮೇಲೆ ಹತೋಟಿ ಇಡಲು 1825ರಲ್ಲಿ ಮಂಡಿಸಿದ ಶಾಸನ (ಕ್ವಾರಂಟೈನ್ ಎಕ್ಟ್ 1825).
	
2 ಭಾರತ ಸಾಂಕ್ರಾಮಿಕ ಜಾಡ್ಯಗಳ ಹತೋಟಿ ಶಾಸನ 1857.
	
3 ಭಾರತದ ನೌಕಾವ್ಯಾಪಾರಿಗಳ ಶಾಸನ 1859.
	
4 ಭಾರತದ ದಂಡ ವಿಧಿಸುವ ಶಾಸನ 1860 (ಇಂಡಿಯನ್ ಪೀನಲ್ ಕೋಡ್) . 
	
5 ಜನನಗಳ ಮತ್ತು ಮರಣಗಳ ದಾಖಲೆ ಶಾಸನ 1873.
	
6 ಸಿಡುಬು ನಿರೋಧ ಚುಚ್ಚು ಮದ್ದಿನ ಶಾಸನ 1880.
	
7 ವೈದ್ಯಕೀಯ ಶಾಸನ 1886.
	
8 ಕುಷ್ಠರೋಗಿಗಳಿಗನ್ವಯಿಸುವ ಶಾಸನ 1898
	
9 ಭಾರತದ ಹುಚ್ಚು ಹಿಡಿದವರಿಗೆ ಅನ್ವಯಿಸುವ ಶಾಸನ 1912.	 
	
10 ಭಾರತ ರೆಡ್ಕ್ರಾಸ್ ಶಾಸನ 1922.
	
11 ಭಾರತ ಗಣಿಗಳ ಶಾಸನ 1923.
	
12 ಕಾರ್ಮಿಕರ ಪರಿಹಾರ ನೀಡುವ ಕಾಯಿದೆ 1923.
	
13 ಕೇಂದ್ರ ಸರ್ಕಾರದ ಆಹಾರ ಶಾಸನ 1940
	
14 ಭಾರತದ ಗಿರಣಿಗಳ ಶಾಸನ 1948.

15 ಕಾರ್ಮಿಕರ ರಾಜ್ಯವಿಮಾ ಶಾಸನ 1948.

16 ಕಲ್ಲಿದ್ದಲು ಗಣಿ ಕೆಲಸಗಾರರ ಮಿತವ್ಯಯ ಮತ್ತು ಲಾಭಾಂಶ ಸಂಗ್ರಹ ನಿಧಿ ಯೋಜನೆ 1948.
	
17 ಕೆಲಸಗಾರರ ಮಿತವ್ಯಯ ಸಂಗ್ರಹ ನಿಧಿ ಶಾಸನ 1952.

18 ಆಹಾರದ ಕೀಳ್ಬೆರಕೆ ತಡೆಗಟ್ಟುವ ಶಾಸನ 1954.

19 ವಿಶೇಷ ರೀತ್ಯಾ ಲಗ್ನಗಳಿಗೆ ಅನ್ವಯಿಸುವ ಶಾಸನ 1954.
	
20 ಹಿಂದೂಧರ್ಮದ ಲಗ್ನ ಶಾಸನ 1955.
	
21 ವರದಕ್ಷಿಣೆ ಮತ್ತು ಕನ್ಯಾದಕ್ಷಿಣೆ ಸ್ವೀಕಾರ ರದ್ದುಗೊಳಿಸಿದ ಶಾಸನ.
	
22 ಕೊಳಚೆ ಪ್ರದೇಶ ನಿರ್ಮೂಲನ ಶಾಸನ.
	
23 ಹೆರಿಗೆ ಸಹಾಯಾರ್ಥ ಪರಿಹಾರ ಶಾಸನ.
	
24 ಅಶಕ್ತರ ಸಹಾಯ ನಿಧಿ ಶಾಸನ.
	
25 ಆಶ್ರಿತರ ಸಹಾಯ ನಿಧಿ ಶಾಸನ.
	
26 ಸ್ತ್ರೀಯರ ಮತ್ತು ಹೆಣ್ಣುಮಕ್ಕಳ ಅನೈತಿಕ ವ್ಯಾಪಾರನಿಗ್ರಹಣ ಶಾಸನ.
	ಇತ್ಯಾದಿ.
	
ಇವಿಷ್ಟೇ ಅಲ್ಲದೆ ಇನ್ನೂ ಅನೇಕ ಶಾಸನಗಳು ಜಾರಿಯಲ್ಲಿವೆ. ಉದಾಹರಣೆಗೆ, ಪೌರಸಭಾ ಶಾಸನ, ಗ್ರಾಮಪಂಚಾಯತಿ ಶಾಸನ-ಇವು ತಮ್ಮ ತಮ್ಮ ಕ್ಷೇತ್ರಗಳಿಗೆ ಅನ್ವಯಿಸುವಂತೆ ಜನಾರೋಗ್ಯ ಮತ್ತು ನೈರ್ಮಲ್ಯ, ಕುಡಿಯುವ ನೀರು, ಕಕ್ಕಸು ನಿವೇಶನಗಳ ನಿರ್ಮಾಣ, ಕೊಳಚೆ ಪ್ರದೇಶಗಳ ನಿರ್ಮೂಲನ, ಸಾಂಕ್ರಾಮಿಕ ಜಾಡ್ಯಗಳ ಹತೋಟಿ ವಸತಿ ಸೌಕರ್ಯ, ವೇಶ್ಯಾಗೃಹಗಳ ಹತೋಟಿ ಇತ್ಯಾದಿ ವಿಷಯಗಳಿಗೆ ಅನ್ವಯಿಸುವ ನಿಯಮಗಳನ್ನು ಅಡಕಮಾಡಿ ಜಾರಿಗೆ ತಂದಿವೆ. ಕೆಲವು ರಾಜ್ಯಗಳಲ್ಲಿ ಜನಾರೋಗ್ಯ ಮತ್ತು ನೈರ್ಮಲ್ಯ ಹಾಗೂ ಸಮಾಜ ಕಲ್ಯಾಣಕ್ಕೆ ಅನ್ವಯಿಸುವ ಹಲವಾರು ನಿಯಮಗಳನ್ನು ಕ್ರೋಢೀಕರಿಸಿ ಜನಾರೋಗ್ಯ ಶಾಸನ ಎಂಬ ಸರ್ವವ್ಯಾಪಿ ಶಾಸನವನ್ನೂ ಜಾರಿಗೆ ತಂದಿದ್ದಾರೆ.
	
ಈ ವಿಷಯದ ಉಪಸಂಹಾರಕ್ಕೆ ಮೊದಲು, ಅಂತರರಾಷ್ಟ್ರೀಯ ಮಟ್ಟದಲ್ಲಿ ಚಟುವಟಿಕೆಗಳನ್ನು ಸ್ಥೂಲವಾಗಿ ಪರಿಶೀಲಿಸಬಹುದು.
	
ಆರೋಗ್ಯ ಮತ್ತು ಕ್ಷೇಮರಕ್ಷಣೆಯ ವಿಚಾರ ಅಂತರರಾಷ್ಟ್ರೀಯ ಹೊಣೆ ಎಂಬುದನ್ನು ಅನೇಕ ಮಹನೀಯರು 17-18ನೆಯ ಶತಮಾನಗಳಲ್ಲಿ ತಾವು ಬರೆದ ಗ್ರಂಥಗಳಲ್ಲಿ ಹಾಗೂ ವರದಿಗಳಲ್ಲಿ ನಮೂದಿಸಿದ್ದಾರೆ. ಈ ವಿಚಾರದಲ್ಲಿ ಲೀಗ್ ಆಫ್ ನೇಷನ್ಸ್, ಸಂಯುಕ್ತ ರಾಷ್ಟ್ರಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳು ತಮ್ಮ ಸಂಸ್ಥೆಗಳ ಉದ್ದೇಶವನ್ನು ತಮ್ಮ ತಮ್ಮ ರಾಜ್ಯಾಂಗಗಳಲ್ಲಿ ಅಡಕ ಮಾಡಿವೆ. ಸಾಕಷ್ಟು ಪ್ರಾಮುಖ್ಯವನ್ನೂ ಕೊಟ್ಟಿವೆ. ತಿಳಿವಳಿಕೆಯಿಂದ ಪ್ರೇರಿತವಾದ ಜನಾಭಿಪ್ರಾಯ ಹಾಗೂ ಜನತೆಯ ಸಂಪೂರ್ಣ ಸಹಕಾರ ಜನಾರೋಗ್ಯವನ್ನು ಕಾಪಾಡಲು ಅತ್ಯಂತ ಮುಖ್ಯ ಮತ್ತು ಅಗತ್ಯವೆಂದು ಈ ಅಂತರರಾಷ್ಟ್ರೀಯ ಸಂಸ್ಥೆಗಳು ಒತ್ತಿ ಹೇಳಿವೆ. ಪ್ರತಿಯೊಬ್ಬ ಮಾನವನೂ ತನ್ನ ಆರೋಗ್ಯವನ್ನು ಉನ್ನತ ಮಟ್ಟದಲ್ಲಿಟ್ಟು ಕಾಪಾಡಿ ಪರಸ್ಪರ ನೆರವು ನೀಡುವುದು ತನ್ನ ಕರ್ತವ್ಯ ಎಂದು ತಿಳಿದಿದೆ. ಸಂಯುಕ್ತ ರಾಷ್ಟ್ರಗಳ ಅಂತರರಾಷ್ಟ್ರೀಯ ಮಕ್ಕಳ ತುರ್ತುನಿಧಿ, ಆಹಾರ ಮತ್ತು ಕೃಷಿಸಂಸ್ಥೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಈ ಶಾಖೆಗಳೆಲ್ಲವೂ ಇದೇ ಧ್ಯೇಯವನ್ನೊಳಗೊಂಡು ಕಾರ್ಯಮಾಡುತ್ತಿವೆ.
	
ಖಾಸಗಿ ಸಂಸ್ಥೆಗಳ ಪಾತ್ರ ಏನೂ ಕಡಿಮೆ ಇಲ್ಲ. ಉದಾಹರಣೆಗೆ, ಅಮೆರಿಕದ ರಾಕ್ಫೆಲ್ಲರ್ ಫೌಂಡೇಷನ್, ಅಂತರರಾಷ್ಟ್ರೀಯ ರೆಡ್‍ಕ್ರಾಸ್ ಮುಂತಾದವು ಅತ್ಯಂತ ದಕ್ಷತೆಯಿಂದ ಮಾನವ ಕುಲಕೋಟಿಗೆ ಸೇವೆ ಸಲ್ಲಿಸುತ್ತಿವೆ.
ಮುಂದೆ ಬರುವ ಶಾಸನಗಳು ಮಾನವಕೋಟಿಯನ್ನು ಪರಮಾಣುಶಕ್ತಿಯಿಂದ ಉತ್ಪತ್ತಿಯಾಗುವ ವಿದ್ಯುತ್‍ವಿಕಿರಣ ಕ್ರಿಯಾಶಕ್ತಿಯಿಂದ ಕಾಪಾಡಲು, ಆಧುನಿಕ ಕೈಗಾರಿಕೆ ಉದ್ಯಮಗಳು ಹಾಗೂ ಸ್ವಯಂಚಾಲಿತ ಯಂತ್ರಗಳಿಂದ ವಾತಾವರಣ ಮಲಿನವಾಗದಂತೆ ರಕ್ಷಣೆಕೊಡಲು, ಕೃತಕ ಗರ್ಭಧಾರಣೆಯಿಂದ ಉದ್ಭವವಾಗುವ ವೈಯಕ್ತಿಕ ಸಮಸ್ಯೆಗಳ ಪರಿಹಾರ ಮಾಡಲು, ಬದಲಿ ಅಂಗಗಳ ಜೋಡಣೆಯಿಂದ ಮಾನವ ಅಮರನಾದಲ್ಲಿ ಯಾವ ರೀತಿ ಸಮಾಜ ನಡೆದುಕೊಳ್ಳಬೇಕು, ಯಾರಿಗೆ ಬದಲಿ ಜೋಡಣೆಯ ಅಗತ್ಯ, ಅಂತರೀಕ್ಷದಲ್ಲಿ ಯಾನ ಮಾಡುವವರ ಆರೋಗ್ಯ ಸಂರಕ್ಷಣೆಗೆ ನಿಯಮಗಳಾವುವು-ಇವೇ ಮುಂತಾದ ಗಂಭೀರ ಪ್ರಶ್ನೆಗಳನ್ನು ಎದುರಿಸಿ ಶಾಸನಗಳನ್ನು ರೂಪಿಸಲೇಬೇಕಾಗುತ್ತದೆಂಬುದರಲ್ಲಿ ಅನುಮಾನವೇ ಇರಲಾರದು.		   
 (ಆರ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ